ಬಸ್ತಾರ್: ಅಂತಿಮ ಸಂಸ್ಕಾರಕ್ಕೆ ಹಣವಿಲ್ಲದೆ, ಪುತ್ರನ ಮೃತದೇಹ ದಾನ ಮಾಡಿದ ತಾಯಿ!
ಬಸ್ತಾರ್ (ಛತ್ತೀಸ್ಗಢ): ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದ ತನ್ನ ಪುತ್ರನ ಅಂತಿಮ ಸಂಸ್ಕಾರ ನಡೆಸಲು ಹಣವಿಲ್ಲದೆ ಸಹಾಯಕ್ಕಾಗಿ ಪರದಾಡಿ ಕೊನೆಗೆ ಯಾವ ದಾರಿಯೂ ಕಾಣದ ಮಹಿಳೆಯೊಬ್ಬರು, ಅಸಹಾಯಕ ಸ್ಥಿತಿಯಲ್ಲಿ ಪುತ್ರನ ಮೃತದೇಹವನ್ನು ದಾನ ಮಾಡಿರುವ ಘಟನೆ ಛತ್ತೀಸ್ಗಢದ ಬಸ್ತಾರ್'ನಲ್ಲಿ ನಡೆದಿದೆ.
ಫೆ.12 ರಂದು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮಹಿಳೆಯ ಪುತ್ರ ಬಾಮನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆ.15 ರಂದು ಚಿಕಿತ್ಸೆ ಫಲಕಾರಿಯಾಗದೆ ಬಾಮನ್ ಮೃತಪಟ್ಟಿದ್ದ.
ಪುತ್ರ ಸಾವನ್ನಪ್ಪಿದ ಬಳಿಕ ಅಂತಿಮ ಸಂಸ್ಕಾರ ನಡೆಸಲು ತಾಯಿ ಹಲವರ ಬಳಿ ಸಹಾಯ ಕೇಳಿದ್ದಾರೆ. ಯಾರೊಬ್ಬರು ಸಹಾಯ ಮಾಡದ ಹಿನ್ನಲೆಯಲ್ಲಿ ಜಗ್ದಾಲ್ಪುರ ವೈದ್ಯಕೀಯ ಕಾಲೇಜಿಗೆ ಮೃತದೇಹವನ್ನು ದಾನ ಮಾಡಿದ್ದಾರೆಂದು ತಿಳಿದುಬಂದಿದೆ.
ವ್ಯಕ್ತಿಯ ಸಂಬಂಧಿಯೊಬ್ಬರು ಮಾತನಾಡಿ, ಅಂತಿಮ ಸಂಸ್ಕಾರ ನಡೆಸಲು ಯಾರೊಬ್ಬರೂ ಸಹಾಯ ಮಾಡಲಿಲ್ಲ. ನಾನು ಕಡು ಬಡವರಾಗಿದ್ದು, ಮೃತದೇಹವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ, ಅಂತಿಮ ಸಂಸ್ಕಾರ ನಡೆಸಲು ನಮ್ಮ ಬಳಿ ಹಣವಿರಲಿಲ್ಲ. ಸಹಾಯಕ್ಕಾಗಿ ಪರದಾಡುತ್ತಿದ್ದ ವೇಳೆ ಆಸ್ಪತ್ರೆಯಲ್ಲಿದ್ದ ಕೆಲವರು ಮೃತದೇಹವನ್ನು ದಾನ ಮಾಡುವಂತೆ ತಿಳಿಸಿದರು. ಹೀಗಾಗಿ ಮೃತದೇಹವನ್ನು ದಾನ ಮಾಡಿದ್ದೇವೆಂದು ಹೇಳಿದ್ದಾರೆ.
ವೈದ್ಯಕೀಯ ಕಾಲೇಜಿನ ಶವಾಗಾರದ ವ್ಯವಸ್ಥಾಪಕ ಮಂಗಳ್ ಸಿಂಗ್ ಎಂಬವವರು ಮಾತನಾಡಿ, ವ್ಯಕ್ತಿಯ ಕುಟುಂಬಸ್ಥರಿ ಕಡು ಬಡವರಾಗಿದ್ದು, ಹೀಗಾಗಿ ಮೃತದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವಂತೆ ತಿಳಿಸಿದ್ದೆ ಎಂದು ಹೇಳಿದ್ದಾರೆ.