ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಗೀತಾಂಜಲಿ ಜೆಮ್ಸ್ ಅಂಡ್ ಜ್ಯುವೆಲರ್ಸ್ ಸಂಸ್ಥೆಯ ನಿರ್ದೇಶಕ ಮೆಹುಲ್ ಚೋಕ್ಸಿ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ನಕಲಿ ಪ್ರಮಾಣಪತ್ರಗಳನ್ನು ನೀಡಿ ಸುಮಾರು 11, 400 ಕೋಟಿ ರೂ ಮೌಲ್ಯಗ ಸಾಲದ ಬಾಂಡ್ ಪಡೆದ ಆರೋಪದ ಮೇರೆಗೆ ಮೆಹುಲ್ ಚೋಕ್ಸಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಸಿಬಿಐ ಅಧಿಕಾರಿಗಳು ವಜ್ರದ ಉದ್ಯಮಿ ನೀರವ್ ಮೋದಿ ಮತ್ತು ಚೋಕ್ಸಿ ವಿರುದ್ಧ ತನಿಖೆ ನಡೆಸುತ್ತಿದ್ದು, ಇದರ ನಡುವೆಯೇ ಮತ್ತೊಂದು ಎಫ್ ಐಆರ್ ದಾಖಲಾಗಿರುವುದು ಚೋಕ್ಸಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಮೂಲಗಳ ಪ್ರಕಾರ ಸಾಲದ ನಿಮಿತ್ತ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 143 ಪ್ರಮಾಣ ಪತ್ರಗಳನ್ನು ಸಲ್ಲಿಕೆ ಮಾಡಿದ್ದು, ಇದರ ಆಧಾರದ ಮೇಲೆ ಚೋಕ್ಸಿ ವಿವಿಧ ಬ್ಯಾಂಕ್ ಗಳಿಂದ ಸುಮಾರು 4, 886 ಕೋಟಿರೂ ಸಾಲ ಪಡೆದಿದ್ದರಂತೆ.
ಈ ಸಾಲದ ಮೊತ್ತವನ್ನು ಚೋಕ್ಸಿ ಮೂರು ಆಭರಣ ಸಂಸ್ಥೆಗಳಿಗೆ ನೀಡಿದ್ದು, ಗೀತಾಂಜಲಿ ಜೆಮ್ಸ, ನಕ್ಷತ್ರ ಜ್ಯುವೆಲರ್ಸ್ ಮತ್ತು ಗಿಲಿ ಜ್ಯುವೆಲರ್ಸ್ ಸಂಸ್ಥೆಗಳಿಗೆ ನೀಡಿದ್ದರು ಎನ್ನಲಾಗಿದೆ. 2017-18ರ ಸಂದರ್ಭದಲ್ಲಿ ತನಿಖಾಧಿಕಾರಿಗಳು ಚೋಕ್ಸಿ ವಿರುದ್ಧ 280 ಕೋಟಿ ಮೌಲ್ಯದ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಈ ಪ್ರಮಾಣ 6,498 ಕೋಟಿಗಳಿಗೇರಿದ್ದು, ಪ್ರಕರಣದಲ್ಲಿ ಪ್ರಮುಖ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಚೋಕ್ಸಿ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಿದ ಪ್ರಮಾಣ ಪತ್ರದ ಆಧಾರದ ಮೇಲೆ ಇತರೆ ಬ್ಯಾಂಕ್ ಗಳು ಚೋಕ್ಸಿ ಮತ್ತು ನೀರವ್ ಮೋದಿಗೆ ಸಾಲ ನೀಡಿದ್ದವು. ಇದೀಗ ಈ ಸಾಲವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ತೀರಿಸಬೇಕಿದೆ.