ಅಹ್ಮದಾಬಾದ್: ದಲಿತ ಮುಖಂಡ ಭಾನು ಭಾಯ್ ಅವರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಗುಜರಾತ್ ಪೊಲೀಸರು ಕಾರಿನಿಂದ ಬಲವಂತವಾಗಿ ಎಳೆದು ವಿಚಾರಣೆ ನಡೆಸಿದ ಪ್ರಸಂಗ ವರದಿಯಾಗಿದೆ.
ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಪಾಲ್ಗೊಳ್ಳಲು ಜಿಗ್ನೇಶ್ ತೆರಳುತ್ತಿದ್ದ ವೇಳೆಯಲ್ಲಿ ಪೊಲೀಸರು ವಡಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಜವಾಹರ್ ಲಾಲ್ ವಿವಿ ವಿದ್ಯಾರ್ಥಿ ಯುನಿಯನ್ ನ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಟ್ವೀಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು, ಸಭೆಗೆ ತೆರಳುತ್ತಿದ್ದ ವೇಳೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಯವರ ಕಾರನ್ನು ತಡೆದ ಪೊಲೀಸರು ಜಿಗ್ನೇಶ್ ರನ್ನು ಹೊರಗೆಳೆದಿದ್ದಾರೆ ಎನ್ನಲಾಗಿದೆ.
"ದಲಿತ ಹುತಾತ್ಮ ಭಾನು ಭಾಯ್ ಅವರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಜಿಗ್ನೇಶ್ ಮೇವಾನಿಯವರನ್ನು ಗುಜರಾತ್ ಪೊಲೀಸರು ತಡೆದಿದ್ದಾರೆ. ಈ ವೇಳೆ ಜಿಗ್ನೇಶ್ ಅವರನ್ನು ಕಾರಿನಿಂದ ಹೊರಗೆಳೆದಿದ್ದು, ಕಾರಿನ ಕೀಯನ್ನು ಪೊಲೀಸರು ತುಂಡರಿಸಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡು… ಮೊದಲು ಅವರು ದಲಿತರಿಂದ ಭೂಮಿ ಕಸಿದುಕೊಂಡರು. ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದರು. ಈಗ ಅವರು ಜನಪ್ರತಿನಿಧಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ” ಎಂದು ಶೆಹ್ಲಾ ರಶೀದ್ ಟ್ವೀಟ್ ಮಾಡಿದ್ದಾರೆ.