ಕೊಠಾರಿ ಕಾನ್ಪುರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳ ದಾಳಿ
ನವದೆಹಲಿ: ವಿವಿಧ ಬ್ಯಾಂಕ್ ಗಳಿಗೆ 800 ಕೋಟಿ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಪೆನ್ ತಯಾರಿಕಾ ಸಂಸ್ಥೆ ರೋಟೋಮ್ಯಾಕ್ ಸಂಸ್ಥೆಯ ವಿರುದ್ಧ ಸಿಬಿಐ ಅಧಿಕಾರಿಗಳು ಸೋಮವಾರ ವಂಚನೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ರೋಟೋಮ್ಯಾಕ್ ಸಂಸ್ಥೆಯ ಮಾಲೀಕ ವಿಕ್ರಮ್ ಕೊಠಾರಿ ಅವರ ಕಾನ್ಪುರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಶೋಧ ಕಾರ್ಯಾಚರಣೆ ಮುಂದುವರೆದಿರುವಂತೆಯೇ ಇತ್ತ ಸಿಬಿಐ ಅಧಿಕಾರಿಗಳು ರೋಟೋಮ್ಯಾಕ್ ಸಂಸ್ಥೆ. ಅದರ ಮಾಲೀಕರು ಹಾಗೂ ಅಧಿಕಾರಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ದಾಳಿ ಸಂಬಂಧ ಸಿಬಿಐ ಅಧಿಕಾರಿಗಳು ಯಾರನ್ನೂ ವಶಕ್ಕೆ ಪಡೆದಿಲ್ಲ ಮತ್ತು ಯಾರನ್ನೂ ವಿಚಾರಣೆಗೊಳಪಡಿಸಿಲ್ಲ ಎಂದು ತಿಳಿದುಬಂದಿದ್ದು, ಪ್ರಸ್ತುತ ದಾಖಲೆಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ ಎನ್ನಲಾಗಿದೆ.
ಖ್ಯಾತ ಪೆನ್ ತಯಾರಿಕಾ ಸಂಸ್ಥೆ ‘ರೋಟೋಮ್ಯಾಕ್’ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿ ಅವರು ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಸುಮಾರು 800 ಕೋಟಿ ರೂಪಾಯಿ ಸಾಲ ಮಾಡಿದ್ದು, ಸಾಲ ನೀಡದ ಸಂಬಂಧ ಬ್ಯಾಂಕ್ ಅಧಿಕಾರಿಗಳು ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ರೋಟೋಮ್ಯಾಕ್ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿ ಒಟ್ಟು ಐದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಸುಮಾರು 800 ಕೋಟಿ ರುಪಾಯಿಗೂ ಹೆಚ್ಚು ಸಾಲ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗಳಿಂದ ಕೊಠಾರಿ 800 ರೂ.ಸಾಲ ಪಡೆದಿದ್ದಾರಂತೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೊಠಾರಿ 485 ಕೋಟಿ ರೂ ಸಾಲಪಡೆದಿದ್ದು, ಅಲಹಾಬಾದ್ ಬ್ಯಾಂಕ್ ನಿಂದ 352 ಕೋಟಿ ರೂ. ಮತ್ತು ಉಳಿದ 3 ಬ್ಯಾಂಕ್ ಗಳಿಂದಲೂ ಸಾಲ ಪಡೆದಿದ್ದಾರೆ ಎಂದು ಹೇಳಲಾಗಿದೆ.