ಚೆನ್ನೈ: ಸುಪ್ರೀಂ ಕೋರ್ಟ್ ನೀಡಿದ ಕಾವೇರಿ ಅಂತಿಮ ತೀರ್ಪಿನಲ್ಲಿ ತಮಿಳುನಾಡು ರಾಜ್ಯ ಪಾಲಿನ ನೀರಿನಲ್ಲಿ ಕಡಿತವಾದ ಹಿನ್ನಲೆಯಲ್ಲಿ ಎಂಕೆ ಸ್ಟಾಲಿನ್ ನೇತೃತ್ವದಲ್ಲಿ ಚರ್ಚೆ ಮಾಡಲು ಡಿಎಂಕೆ ಪಕ್ಷ ಸರ್ವ ಪಕ್ಷ ಸಭೆ ಕರೆದಿದೆ.
ಈ ಬಗ್ಗೆ ಸ್ವತಃ ಡಿಎಂಕೆ ಪಕ್ಷದ ಮುಖ್ಯಸ್ಥ ಎಂಕೆ ಸ್ಟಾಲಿನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ತಮಿಳುನಾಡಿನ ನೀರಿನ ಪಾಲಿನಲ್ಲಿ 14.75 ಟಿಎಂಸಿ ನೀರು ಕಡಿತವಾಗಿದೆ. ಹೀಗಾಗಿ ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ರಾಜಕೀಯವನ್ನು ಪಕ್ಕಕ್ಕಿಟ್ಟು ಸರ್ವಪಕ್ಷ ಸಭೆ ಕರೆಯಲಾಗಿದೆ. ಕಾವೇರಿ ವಿಚಾರದಲ್ಲಿ ಯಾವುದೇ ಪಕ್ಷ ಕೂಡ ರಾಜಕೀಯ ಮಾಡಬಾರದು ಮತ್ತು ರಾಜ್ಯದ ಜನತೆಯ ಹಿತದೃಷ್ಚಿಯಿಂದ ರಾಜ್ಯದ ರಾಜಕಾರಣಿಗಳು ಒಗ್ಗೂಡಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಇದೇ ಕಾರಣಕ್ಕೆ ಪ್ರಮುಖ ವಿರೋಧ ಪಕ್ಷವಾಗಿರುವ ಡಿಎಂಕೆ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದ್ದು, ಸಭೆಗೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಮುಖಂಡರಿಗೂ ಆಹ್ವಾನ ನೀಡಲಾಗಿದೆ. ಅಲ್ಲದೆ ಈಗಾಗಲೇ ರಾಜಕೀಯ ಪಕ್ಷ ಘೋಷಣೆ ಮಾಡಿರುವ ರಜನಿಕಾಂತ್, ಮುಂದಿನವಾರ ಪಕ್ಷ ಘೋಷಣೆ ಮಾಡಲಿರುವ ನಟ ಕಮಲ್ ಹಾಸನ್, ವಿಜಯ್ ಕಾಂತ್ ಅವರ ಪಕ್ಷಗಳಿಗೂ ಆಹ್ವಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಇನ್ನು ಸರ್ವಪಕ್ಷ ಸಭೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಎಲ್ಲ ಪಕ್ಷಗಳಿಂದ ಪ್ರತಿಕ್ರಿಯೆ ಬಂದ ಬಳಿಕ ದಿನಾಂಕ ನಿಗದಿ ಪಡಿಸುವುದಾಗಿ ಹೇಳಿದ್ದಾರೆ.
ಇನ್ನು ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 16ರಂದು ತನ್ನ ಅಂತಿಮ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ತಮಿಳುನಾಡಿಗೆ ಬಿಡಬೇಕಿರುವ ನೀರಿವ ಪ್ರಮಾಣದಲ್ಲಿ 14.75 ಟಿಎಂಸಿ ನೀರನ್ನು ಕಡಿತಗೊಳಿಸಿ, 177.25 ಟಿಎಂಸಿ ನೀರಿಗೆ ಸೀಮಿತಗೊಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics