ಕಾನ್ಪುರ: ವಿವಿಧ ಬ್ಯಾಂಕ್ ಗಳಿಗೆ 800 ಕೋಟಿ ರೂ. ವಂಚನೆ ಮಾಡಿ ದೇಶದಿಂದ ಪರಾರಿಯಾಗಿರುವ ಕುರಿತು ಮಾಧ್ಯಮಗಳಲ್ಲಿ ಆರೋಪ ಕೇಳಿಬರುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ರೋಟೋಮ್ಯಾಕ್ ಸಂಸ್ಥೆಯ ಮಾಲೀಕ ವಿಕ್ರಮ ಕೊಠಾರಿ ತಾವು ದೇಶ ಬಿಟ್ಟು ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರೋಟೋಮ್ಯಾಕ್ ಸಂಸ್ಥೆಯ ಮಾಲೀಕ ವಿಕ್ರಮ್ ಕೊಠಾರಿ ವಿವಿಧ ಬ್ಯಾಂಕ್ ಗಳಿಂದ ಸುಮಾರು 800 ಕೋಟಿ ರೂ. ಸಾಲ ಮಾಡಿ ತೀರಸದೇ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೊಠಾರಿ, ತಾವು ದೇಶ ಬಿಟ್ಟು ಹೋಗಿಲ್ಲ. ಕಾನ್ಪುರದಲ್ಲೇ ಇದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಸಂಸ್ಥೆಯ ವಕ್ತಾರರೊಂದಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಿಕ್ರಮ್ ಕೊಠಾರಿ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಗಳೆಲ್ಲಾ ಸುಳ್ಳು. ತಾವು ದೇಶ ಬಿಟ್ಟು ಹೋಗಿಲ್ಲ. ಕಾನ್ಪುರದಲ್ಲೇ ಇದ್ದೇನೆ ಎಂದು ಹೇಳಿದ್ದಾರೆ.
ಅಂತೆಯೇ ವಾಣಿಜ್ಯ ವಹಿವಾಟು ಕಾರಣದಿಂದಾಗಿ ವಿದೇಶಗಳಿಗೂ ತೆರಳುತ್ತಿರುತ್ತೇನೆ. ಅಂದ ಮಾತ್ರಕ್ಕೆ ನಾನು ದೇಶ ಬಿಟ್ಟು ಪರಾರಿಯಾಗಿದ್ದೇನೆ ಎಂಬುದು ಸುಳ್ಳು ಎಂದು ಕೊಠಾರಿ ಸ್ಪಷ್ಟನೆ ನೀಡಿದ್ದಾರೆ.
ಕಾನ್ಪುರ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಕೊಠಾರಿ
ಅತ್ತ ಪತ್ರಿಕೆಗಳಲ್ಲಿ ವಿಕ್ರಮ್ ಕೊಠಾರಿ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ರೋಟೋಮ್ಯಾಕ್ ಸಂಸ್ಥೆಯ ಮಾಲೀಕ ವಿಕ್ರಮ್ ಕೊಠಾರಿ ಕಾನ್ಪುರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಾನ್ಪುರದಲ್ಲಿ ನಡೆದ ಉದ್ಯಮಿಯೊಬ್ಬರ ಮಗಳ ಮದುವೆಗೆ ವಿಕ್ರಮ ಕೊಠಾರಿ ಆಗಮಿಸಿದ್ದು, ಈ ವೇಳೆ ತೆಗೆದಿದ್ದ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೊಠಾರಿ ಜಾಗರಣ್ ಸಮೂಹದ ಮಾಲೀಕ ಸಂಜೀಪ್ ಗುಪ್ತಾ ಅವರ ಮಗಳ ಮದುವೆಗೆ ತೆರಳಿದ್ದರು.
ಪ್ರಖ್ಯಾತ ‘ರೋಟೋಮ್ಯಾಕ್’ ಪೆನ್ ಕಂಪನಿಯ ಮಾಲೀಕರು ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಸುಮಾರು 800 ಕೋಟಿ ರೂಪಾಯಿ ಸಾಲ ಮಾಡಿದ್ದು, ಸಾಲ ನೀಡದ ಸಂಬಂಧ ಬ್ಯಾಂಕ್ ಅಧಿಕಾರಿಗಳು ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ರೋಟೋಮ್ಯಾಕ್ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿ ಒಟ್ಟು ಐದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಸುಮಾರು 800 ಕೋಟಿ ರುಪಾಯಿಗೂ ಹೆಚ್ಚು ಸಾಲ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗಳಿಂದ ಕೊಠಾರಿ 800 ರೂ.ಸಾಲ ಪಡೆದಿದ್ದಾರಂತೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೊಠಾರಿ 485 ಕೋಟಿ ರೂ ಸಾಲಪಡೆದಿದ್ದು, ಅಲಹಾಬಾದ್ ಬ್ಯಾಂಕ್ ನಿಂದ 352 ಕೋಟಿ ರೂ. ಮತ್ತು ಉಳಿದ 3 ಬ್ಯಾಂಕ್ ಗಳಿಂದಲೂ ಸಾಲ ಪಡೆದಿದ್ದಾರೆ ಎಂದು ಹೇಳಲಾಗಿದೆ.