ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಬ್ಯಾಂಕ್ ವೊಂದರಲ್ಲಿ ಮೂರು ವರ್ಷ ಪೂರೈಸಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಸಾರ್ವಜನಿಕ ಬ್ಯಾಂಕ್ ಗಳಿಗೆ ಸಲಹೆ ನೀಡಿದೆ.
ಈ ಬಗ್ಗೆ ಸೋಮವಾರ ಕೇಂದ್ರ ವಿಚಕ್ಷಣಾ ಆಯೋಗ ಸಾರ್ವಜನಿಕ ಬ್ಯಾಂಕ್ ಗಳಿಗೆ ಸಲಹೆ ನೀಡಿದ್ದು, ಬ್ಯಾಂಕ್ ವೊಂದರಲ್ಲಿ ಮೂರು ವರ್ಷ ಸೇವೆ ಪೂರೈಕೆ ಮಾಡಿರುವ ಅಧಿಕಾರಿಗಳನ್ನು ಮತ್ತೊಂದು ಶಾಖೆ ಅಥವಾ ಊರಿಗೆ ವರ್ಗಾವಣೆ ಮಾಡುವಂತೆ ಸಲಹೆ ನೀಡಿದೆ. ಕೇವಲ ಬ್ಯಾಂಕ್ ಅಧಿಕಾರಿಗಳು ಮಾತ್ರವಲ್ಲದೇ ಸಿಬ್ಬಂದಿಗಳಿಗೂ ಈ ನಿಯಮ ಅನ್ವಯವಾಗಬೇಕು ಎಂದು ಹೇಳಿರುವ ಸಿವಿಸಿ, ಐದು ವರ್ಷ ಪೂರೈಕೆ ಮಾಡಿರುವ ಬ್ಯಾಂಕ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವಂತೆ ಸಲಹೆ ನೀಡಿದೆ.
ಯಾವುದೇ ಕಾರಣಕ್ಕೂ 3 ವರ್ಷ ಪೂರೈಕೆ ಮಾಡಿರುವ ಬ್ಯಾಂಕ್ ನ ಹಿರಿಯ ಅಧಿಕಾರಿಗಳು ಹಾಗೂ 5 ವರ್ಷ ಪೂರೈಕೆ ಮಾಡಿರುವ ಸಿಬ್ಬಂದಿ ಯಾವುದೇ ಕಾರಣಕ್ಕೂ ಒಂದೇ ಶಾಖೆಯಲ್ಲಿರಬಾರದು ಎಂದು ಸಿವಿವಿ ತನ್ನ ಸಲಹೆಯಲ್ಲಿ ತಿಳಿಸಿದೆ ಎನ್ನಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ನಕಲಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಅದರಿಂದ ಸಾವಿರಾರು ಕೋಟಿ ರೂಗಳನ್ನು ಅಕ್ರಮವಾಗಿ ಸಾಲ ಪಡೆದು ವಂಚನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಉದ್ಯಮಿ ನೀರವ್ ಮೋದಿ ಮತ್ತು ಆತನ ಕುಟುಂಬಸ್ಥರು, ಹಾಗೂ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics