ಶ್ರೀನಗರ: ಸುಂಜುವಾನ್ ಸೇನಾ ಶಿಬಿರದ ಮೇಲಿನ ದಾಳಿ ಬಳಿಕ ಸೇನಾಪಡೆಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಪಹರೆ ನಡೆಸುತ್ತಿದ್ದು, ನಿನ್ನೆ ರಾತ್ರಿ ಬದಗಾಮ್ ನಲ್ಲಿರುವ ವಾಯುಸೇನಾ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೋರ್ವನಿಗೆ ಗುಂಡಿಕ್ಕಲಾಗಿದೆ.
ಬದಗಾಮ್ ನಲ್ಲಿರುವ ವಾಯುಸೇನಾ ನಿಲ್ದಾಣದ ಬಳಿ ರಾತ್ರಿ ಅನುಮಾನಾಸ್ಪದವಾಗಿ ಸುಮಾರು 55 ವರ್ಷದ ಈ ವ್ಯಕ್ತಿ ಓಡಾಕೊಂಡಿದ್ದನಂತೆ. ಅಲ್ಲದೆ ಸೇನಾ ಪಡೆಗಳು ಅಲ್ಲಿಂದ ತೆರಳುತ್ತಿದ್ದಂತೆಯೇ ನಿಲ್ದಾಣದೊಳಗೆ ಪ್ರವೇಶ ಮಾಡಲು ಮುಂದಾಗಿದ್ದ. ಈ ವೇಳೆ ಅಲ್ಲಿ ಪಹರೆ ಕಾಯುತ್ತಿದ್ದ ಸೈನಿಕರು ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ಹೊರತಾಗಿಯೂ ನಿಲ್ದಾಣದೊಳಗೆ ಪ್ರವೇಶ ಮಾಡಲು ಶಂಕಿತ ವ್ಯಕ್ತಿ ಯತ್ನಿಸಿದಾಗ ಸೇನಾಪಡೆಗಳು ಆತನ ಮೇಲೆ ಗುಂಡು ಹಾರಿಸಿವೆ.
ಸ್ಥಳೀಯರು ಹೇಳಿರುವಂತೆ ಈತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ತಿಳಿದುಬಂದಿದೆ. ಪ್ರಸ್ತುತ ವ್ಯಕ್ತಿ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬದಗಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಅನಾಮಿಕ ವ್ಯಕ್ತಿಯಾರು ಎಲ್ಲಿಂದ ಬಂದವನು ಎಂಬಿತ್ಯಾದಿ ಅಂಶಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.