ನವದೆಹಲಿ: ಮ್ಯಾಚ್ ಫಿಕ್ಸಿಂಗ್ ಮತ್ತು ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿಗಳಾಗಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹಾಗೂ ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಅವರನ್ನು ಭಾರತಕ್ಕೆ ಕರೆತರಲು ಮಾಡಿರುವ ವೆಚ್ಚಗಳ ಕುರಿತು ಮಾಹಿತಿ ನೀಡಲು ಸಿಬಿಐ ನಿರಾಕರಿಸಿದೆ.
ಪುಣೆ ಮೂಲದ ಆರ್ ಟಿಐ ಕಾರ್ಯಕರ್ತ ವಿಹಾರ್ ಧ್ರುವೆ ಎಂಬುವವರು ಈ ಬಗ್ಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಮಾಡಿದ್ದು, ಈ ಅರ್ಜಿಗೆ ಉತ್ತರಿಸಿರುವ ಸಿಬಿಐ ಅಧಿಕಾರಿಗಳು ಮಲ್ಯಾ, ಲಲಿತ್ ಮೋದಿ ವಾಪಸ್ ಕರೆತರುವ ಸಂಬಂಧ ವ್ಯಯ ಮಾಡಿರುವ ವೆಚ್ಚಗಳ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಭಾರತದ ವಿವಿಧ ಬ್ಯಾಂಕ್ ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ಮಲ್ಯ ಲಂಡನ್ ನಲ್ಲಿ ತಲೆ ಮರೆಸಿಕೊಂಡಿದ್ದು, ಹಾವಲಾ ದಂಧೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಲಲಿತ್ ಮೋದಿ ದೇಶ ಬಿಟ್ಟಿದ್ದಾರೆ. ಈ ಇಬ್ಬರೂ ಆರೋಪಿಗಳ ಬಂಧನಕ್ಕೆ ಸಿಬಿಐ ಅವಿರತ ಪ್ರಯತ್ನ ಮಾಡುತ್ತಿದ್ದು, ಈ ಸಂಬಂಧ ಇಂಟರ್ ಪೋಲ್ ನೆರವು ಕೂಡ ಕೇಳಿದೆ, ಮಾರ್ಚ್ 2016ರಿಂದ ಮಲ್ಯ ದೇಶ ಬಿಟ್ಟು ಪರಾರಿಯಾಗಿ ಲಂಡನ್ ನಲ್ಲಿ ವಾಸ್ತವ್ಯ ಹೂಡಿದ್ದು, ಲಲಿತ್ ಮೋದಿ ಕೂಡ ದೇಶ ಬಿಟ್ಟಿದ್ದಾರೆ.
ಇನ್ನು ಈ ಇಬ್ಬರು ಆರೋಪಿಗಳ ಬಂಧನಕ್ಕೆ ಸರ್ಕಾರ ಮಾಡಿದ ಖರ್ಚಿನ ಕುರಿತು ಪ್ರಶ್ನಿಸಿ ಆರ್ ಟಿಐ ಕಾರ್ಯಕರ್ತ ವಿಹಾರ್ ಧ್ರುವೆ ಅವರು ಕೇಂದ್ರ ವಿತ್ತ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ವಿತ್ತ ಸಚಿವಾಲಯ ಸಿಬಿಐ ಕಚೇರಿಗೆ ಕಳುಹಿಸಿತ್ತು. ಸಿಬಿಐ ಅ ಅರ್ಜಿಯನ್ನು ಪ್ರಸ್ತುತ ಪ್ರಕರಣದ ತನಿಖೆ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಎಸ್ ಐಟಿ ತಂಡಕ್ಕೆ ರವಾನೆ ಮಾಡಿದ್ದು, ಇದಕ್ಕೆ ಉತ್ತರ ನೀಡಿರುವ ಸಿಬಿಐ 2011 ಕೇಂದ್ರ ಸರ್ಕಾರದ ಅಧಿಸೂಚನೆ ಅನ್ವಯ ತನಿಖಾ ಹಂತದಲ್ಲಿರುವ ಪ್ರಕರಣಗಳ ಕುರಿತ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಆರ್ ಟಿಐ ಕಾಯ್ದೆ 24ರ ಅನ್ವಯ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಕೆಲ ವಿಶೇಷ ಪ್ರಕರಣಗಳ ಮಾಹಿತಿ ನೀಡಲು ನಿರಾಕರಿಸಬಹುದು ಎಂಬ ಅಂಶೃವನ್ನು ಸಿಬಿಐ ಉಲ್ಲೇಖ ಮಾಡಿದೆ. ಆರ್ಟಿಐ ಕಾಯ್ದೆಯಿಂದ ಕೆಲವೊಂದು ಸಂಸ್ಥೆಗಳನ್ನು ಹೊರಗಿಡುವ ಸಂಬಂಧ ಕೇಂದ್ರ ಸರ್ಕಾರ 2011ರಲ್ಲಿ ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ ದೆಹಲಿ ಹೈಕೋರ್ಟ್ ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಕುರಿತಾದ ಮಾಹಿತಿಯನ್ನು ಎಲ್ಲಾ ಸಂಸ್ಥೆಗಳು ನೀಡಬೇಕು. ಸೆಕ್ಷನ್ 24ರ ಅಡಿ ಮಾಹಿತಿ ನೀಡಲು ನಿರಾಕರಿಸಬಾರದು ಎಂದು ತಿಳಿಸಿತ್ತು.