ನವದೆಹಲಿ: ಏಳು ರಾಷ್ಟ್ರೀಯ ಬ್ಯಾಂಕುಗಳಿಗೆ 3,695 ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ನಿನ್ನೆ ಬಂಧನಕ್ಕೊಳಗಾಗಿರುವ ರೊಟೊಮ್ಯಾಕ್ ಪೆನ್ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿ ಹಾಗೂ ಪುತ್ರ ರಾಹುಲ್ ನನ್ನು ದೆಹಲಿ ಕೋರ್ಟ್ ಶುಕ್ರವಾರ ಒಂದು ದಿನ ಸಿಬಿಐ ವಶಕ್ಕೆ ನೀಡಿದೆ.
ಸಿಬಿಐ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಇಂದು ಹೆಚ್ಚುವರಿ ಚೀಫ್ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಎರಡು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಆರೋಪಿಗಳ ಪರ ವಕೀಲ ಪ್ರಮೋದ್ ಕುಮಾರ್ ದುಬೇ ಅವರು ಸಿಬಿಐ ವಾದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಸೆಷನ್ಸ್ ಕೋರ್ಟ್ ಹಾಜರುಪಡಿಸುವ ಬದಲು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿರುವ ಸಿಬಿಐ ನಿರ್ಧಾರ ಸರಿಯಿಲ್ಲ ಎಂದಿದ್ದಾರೆ.
ವಾದ ಪ್ರತಿ ವಾದ ಆಲಿಸಿದ ಕೋರ್ಟ್ ಒಂದು ದಿನ ಮಾತ್ರ ಸಿಬಿಐ ವಶಕ್ಕೆ ನೀಡಿ ಆದೇಶ ನೀಡಿದೆ.
ಸಾಲ ನೀಡಿದ ಏಳು ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ರೊಟಮ್ಯಾಕ್ ವಂಚನೆಯ ಬಗ್ಗೆ ಸಿಬಿಐಗೆ ಭಾನುವಾರ ದೂರು ನೀಡಿತ್ತು.