ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ
ನವದೆಹಲಿ: ಭಾರತದಲ್ಲಿ ಬ್ಯಾಂಕಿಂಗ್ ವಚನೆ ಪ್ರಕರಣಗಳಿಗೆ ರಾಜಕಾರಣಿಗಳು ಮಾತ್ರರಲ್ಲ, ಬ್ಯಾಂಕಿಂಗ್ ನಿಯಂತ್ರಕರೂ ಕೂಡ ಹೊಣೆಗಾರರೇ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ ಹೇಳಿದರು.
ಶನಿವಾರ ದೆಹಲಿಯಲ್ಲಿ ನಡೆದ ನಾಲ್ಕನೇ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಇತ್ತೀಚೆಗಿನ ಬ್ಯಾಂಕಿಂಗ್ ವಂಚನೆ ಪ್ರಕರಣಗಳನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದರು. ಈ ವೇಳೆ ಪರೋಕ್ಷವಾಗಿ ಸರ್ಕಾರದ ವಿರುದ್ಧ ಟೀಕಿಸುತ್ತಿರುವವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ ಜೇಟ್ಲಿ, ಭಾರತದಲ್ಲಿ ಸಾಮಾನ್ಯವಾಗಿ ಯಾವುದೇ ದೊಡ್ಡ ವಂಚನೆ ಪ್ರಕರಣ ಬಯಲಿಗೆ ಬಂದರೆ ಮೊದಲಿಗೆ ಸರ್ಕಾರ ಅಥವಾ ರಾಜಕಾರಣಿಗಳನ್ನೂ ದೂರುತ್ತಾರೆ. ಆದರೆ ಇಂತಹ ಬ್ಯಾಂಕಿಂಗ್ ವಂಚನೆ ಪ್ರಕರಣಗಳಿಗೆ ಬ್ಯಾಂಕಿಂಗ್ ನಿಯಂತ್ರಕರೂ ಕೂಡ ಕಾರಣ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಅಂತೆಯೇ ಇತ್ತೀಚೆಗೆ ಕೇಳಿ ಬಂದಿರುವ ಬ್ಯಾಂಕಿಂಗ್ ವಂಚನೆ ಪ್ರಕರಣ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿದ್ದು, ವಂಚನೆ ಪ್ರಕರಣಗಳಿಂದ ನ್ಯಾಯಸಮ್ಮತ ವಹಿವಾಟುಗಳಿಗೆ ಧಕ್ಕೆಯಾಗುತ್ತದೆ. ಅಲ್ಲದೆ ಜಿಡಿಪಿ ಮೇಲೂ ಹೊಡೆತ ಬೀಳುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಗಂಭೀರವಾಗಿದ್ದು, ಬ್ಯಾಂಕಿಂಗ್ ವಂಚನೆ ನಿಯಂತ್ರಣಕ್ಕೆ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಅಂತೆಯೇ ಬ್ಯಾಂಕಿಂಗ್ ವಹಿವಾಟುಗಳ ಮೇಲೆ ಮೂರನೇ ಕಣ್ಣಿಡುವ ಅವಶ್ಯಕತೆ ಇದೆ ಎಂದೂ ಅರುಣ್ ಜೇಟ್ಲಿ ಹೇಳಿದರು.
ಇದೇ ವೇಳೆ ಚುನಾವಣಾ ವೆಚ್ಚ ಮತ್ತು ಜಿಡಿಪಿ ಕುರಿತು ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತೀ ಸರ್ಕಾರ ಪ್ರತೀ ವರ್ಷ 2ರಿಂದ 3 ಚುನಾವಣೆಗಳಿಗೆ ಸಿದ್ಧವಾಗಬೇಕಾಗುತ್ತದೆ. ಇದು ಗಂಭೀರ ವಿಚಾರವಾಗಿದ್ದು, ಇದರಿಂದ ನೇರವಾಗಿ ಸರ್ಕಾರದ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀಳಲಿದ್ದು, ಸುಗಮ ಸರ್ಕಾರ ನಡೆಸಲು ಐದು ವರ್ಷಕ್ಕೊಮ್ಮೆ ಮಾತ್ರ ಚುನಾವಣೆಯಾಗುವಂತೆ ನೋಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಬೇಕು ಎಂದು ಜೇಟ್ಲಿ ಪ್ರತಿಪಾದಿಸಿದ್ದಾರೆ.
ಅಂತೆಯೇ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಮತ್ತೆ ಸಮರ್ಥಿಸಿಕೊಂಡ ಅರುಣ್ ಜೇಟ್ಲಿ ಕ್ಯಾಶ್ ಲೆಸ್ ಇಂಡಿಯಾ ಗಾಗಿ ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ಕ್ರಮ ಅದಾಗಿತ್ತು. ಭವಿಷ್ಯದಲ್ಲಿ ನೋಟು ನಿಷೇಧ ಮತ್ತು ಜಿಎಸ್ ಟಿ ಜಾರಿ ಭಾರತಕ್ಕೆ ಆಶಾದಾಯಕವಾಗಿರಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics