ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳುತ್ತಿರುವ ಬಿಜೆಪಿ ಫೆ.28 ರಂದು ಪಕ್ಷದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದೆ.
ಸಂಪೂರ್ಣ ಒಂದು ದಿನದ ಸಭೆ ಇದಾಗಿರಲಿದ್ದು, ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವುದು, ಪಕ್ಷ ಸಂಘಟನೆಗಳ ಬಗ್ಗೆ ಚರ್ಚೆ ನಡೆಯಲಿದೆ. ಇದೇ ವೇಳೆ ಈ ಬಾರಿಯ ಬಜೆಟ್ ನಲ್ಲಿ ಘೋಷಣೆಯಾಗಿರುವ 10 ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ವಿಮೆ ಒದಗಿಸುವ ಯೋಜನೆ, ಒನ್ ನೇಶನ್-ಒನ್ ಎಲೆಕ್ಷನ್ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂಬ ನಿರೀಕ್ಷೆ ಇದೆ.
ಬಿಜೆಪಿಯ 14 ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ಅಂದರೆ 2014 ರಿಂದ ಪ್ರತಿ ವರ್ಷಕ್ಕೆ ಒಂದರಂತೆ ಚುನಾವಣೆಗೆ ಸಕಾರಾತ್ಮಕವಾಗಿ ಪರಿಣಾಮ ಬೀರಬಲ್ಲಂತಹ ಒಟ್ಟು 5 ಅಂಶಗಳನ್ನು ಪಟ್ಟಿ ಮಾಡಿ ವಿವರಣೆ ನೀಡುವಂತೆ ಬಿಜೆಪಿ ನಾಯಕರಿಗೆ ಸೂಚನೆ ನೀಡಲಾಗಿದೆ.
ಸಭೆಗೂ ಮುನ್ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭುಪೇಂದ್ರ ಯಾದವ್ ಬಿಜೆಪಿಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಬೂತ್ ಮಟ್ಟದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.