ಭಾರತಕ್ಕೆ ಆಗಮಿಸಿದ ಜೋರ್ಡಾನ್ ದೊರೆಗೆ ಪ್ರಧಾನಿ ಮೋದಿಯಿಂದ ಸ್ವಾಗತ
ನವದೆಹಲಿ: ಮೂರು ದಿನಗಳ ಭೇಟಿಗಾಗಿ ಜೋರ್ಡಾನ್ ರಾಜ ಅಬ್ದುಲ್ಲಾ ಭಾರತಕ್ಕೆ ಆಗಮಿಸಿದ್ದಾರೆ. ನವದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅಬ್ದುಲ್ಲಾ ಅವರನ್ನು ಆದರದಿಂದ ಬರಮಾಡಿಕೊಂಡಿದ್ದಾರೆ.
ಉದ್ಯಮಿಗಳ ನಿಯೋಗದೊಡನೆ ಆಗಮಿಸಿರುವ ರಾಜ ಅಬ್ದುಲ್ಲಾ ಅವರ ಭಾರತ ಭೇಟಿಯ ಸಮಯದಲ್ಲಿ ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ, ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ಕ್ಷೇತ್ರದಲ್ಲಿ ಪರಸ್ಪರ ಆಸಕ್ತಿಕರ ವಿಚಾರದ ಬಗೆಗೆ ಚರ್ಚೆಗಳು ನಡೆಯಲಿದೆ.
ಜೋರ್ಡಾನ್ ರಾಜನ ಗೌರವಾರ್ಥ ರಾಷ್ಟ್ರಪತಿ ಕೋವಿಂದ್ ಮಾರ್ಚ್ 1ರಂದು ವಿಶೇಷ ಔತಣ ಕೂಟ ಏರ್ಪಡಿಸಿದ್ದಾರೆ. ಪ್ರಧಾನಿ ಮೋದಿ ಅವರೊಡನೆ ಮಾತುಕತೆಯ ಹೊರತಾಗಿ ರಾಜ ಅಬ್ದುಲ್ಲಾ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಲಿದ್ದಾರೆ.
ಫೆ.28ರಂದು ಜೋರ್ಡಾನ್ ರಾಜ ದೆಹಲಿ ಐಐಟಿಗೆ ಭೇಟಿ ನೀಡಲಿದ್ದಾರೆ. ಅಲ್ಲದೆ ಭಾರತ-ಜೋರ್ಡಾನ್ ಉದ್ಯಮ ವೇದಿಕೆ, ಎಫ್ ಐಸಿಸಿಐ, ಸಿಐಐ, ಎಎಸ್ ಎಸ್ ಒಸಿಎಚ್ ಎಎಮ್ ಜಂಟಿಯಾಗಿ ಆಯೋಜಿಸಲಿರುವ ಸಿಇಒ ಗಳ ದುಂಡು ಮೇಜಿನ ಸಭೆಯಲ್ಲಿ ಸಹ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರದ ಸಚಿವಾಲಯ ಮೂಲಗಳು ಮಾಹಿತಿ ನೀಡಿದೆ.
ಭಾರತೀಯ ಇಸ್ಲಾಮಿಕ್ ಸೆಂಟರ್ ಆಯೋಜಿಸಿರುವ ’ಪ್ರಮೋಟಿಂಗ್ ಅಂಡರ್ ಸ್ಟಾಂಡಿಂಗ್ ಆಂಡ್ ಮಾಡರೇಷನ್’ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವ ಜೋರ್ಡಾನ್ ರಾಜ ಮಾರ್ಚ್ 1ರಂದು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.
ಈ ಭೇಟಿಯ ಸಮಯದಲ್ಲಿ ಎರಡೂ ರಾಷ್ಟ್ರಗಳ ನಡುವೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಕುರಿತ ನಾನಾ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.