ನವದೆಹಲಿ: ತೆರಿಗೆ ವಂಚನೆ ಪ್ರಕರಣ ಸಂಬಂಧ ರೊಟೊಮ್ಯಾಕ್ ಮಾಲೀಕ ವಿಕ್ರಮ್ ಕೊಠಾರಿ ವಿರುದ್ಧ ಆರು ಚಾರ್ಜ್ ಶೀಟ್ ಸಲ್ಲಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.
ಲಖನೌ ವಿಶೇಷ ನ್ಯಾಯಾಲಯದಲ್ಲಿ ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳಡಿಯಲ್ಲಿ ಇಲಾಖೆ ದಾವೆ ಹೂಡಿದೆ. ಉತ್ತರ ಪ್ರದೇಶದ ವಿವಿಧ ಬ್ಯಾಂಕುಗಳಲ್ಲಿ ಸಂಸ್ಥೆಗೆ ಸೇರಿದ 14 ಅಕೌಂಟ್ ಗಳನ್ನು ಪರಿಶೀಲನೆ ನಡೆಸಿದ್ದ ಇಲಾಖೆ ಸಂಸ್ಥೆಯ ನಾಲ್ಕು ಸ್ಥಿರಾಸ್ಥಿಗಳನ್ನು ಅಕ್ರಮದ ಪಟ್ಟಿಗೆ ಸೇರಿಸಿದೆ. ಒಟ್ಟಾರೆ 106 ಕೋ.ರೂ.ತೆರಿಗೆ ಪಾವತಿ ಸಂಬಂಧ ಈ ಕ್ರಮಕ್ಕೆ ಮುಂದಾಗಿರುವುದಾಗಿ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.
ರೊಟೊಮ್ಯಾಕ್ ಸಂಸ್ಥೆ ಏಳು ಬ್ಯಾಂಕ್ ಗಳಿಂದ ಪಡೆದಿದ್ದ 3,695 ಕೋಟಿ ರೂ. ಅಕ್ರಮ ಸಾಲದ ನಿಧಿ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಇದಾಗಲೇ ತನಿಖೆ ನಡೆಸುತ್ತಿದೆ.ರೊಟೋಮ್ಯಾಕ್ ಗ್ಲೋಬಲ್ ಪೈವೇಟ್ ಲಿಮಿಟೆಡ್ ನ ಮಾಲೀಕ ವಿಕ್ರಮ್ ಕೊಠಾರಿ, ಅವರ ಪತ್ನಿ ಸಾಧನಾ ಕೊಠಾರಿ, ಮಗ ರಾಹುಲ್ ಹಾಗೂ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಸಿಬಿಐ ಇದಾಗಲೇ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳು ನೀಡಿದ್ದ ದೂರಿನ ಮೇಲೆ ಮೊಕದ್ದಮೆ ದಾಖಲಿಸಿದ್ದ ಸಿಬಿಐ ಅವರ ಕಛೇರಿಗಳ ಮೇಲೆ ದಾಳಿ ನಡೆಸಿದೆ.
ಇದಲ್ಲದೆ ಇಡಿ ಸಹ ಕೊಠಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದೆ.