ಮಧ್ಯಪ್ರದೇಶ: ಅನಾರೋಗ್ಯ ಪೀಡಿತ ಮಗಳನ್ನು ಬೈಕ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ ತಂದೆ
ರತ್ನಂ(ಮಧ್ಯ ಪ್ರದೇಶ): ಸರಿಯಾದ ವೇಳೆ ಅಂಬುಲೆನ್ಸ್ ದೊರಕದ ಕಾರಣ ಅನಾರೋಗ್ಯ ಪೀಡಿತ ಮಗಳನ್ನು ತಂದೆಯೊಬ್ಬ ಬೈಕ್ ನಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ ಹಾಗೆ ಬೈಕ್ ನಲ್ಲಿ ಕೊಂಡೊಯ್ಯುವಾಗ ಆಸ್ಪತ್ರೆಗೆ ತೆರಳುವ ಮಾರ್ಗದ ನಡುವೆಯೇ ಮಗಳು ಅಸುನೀಗಿದ್ದಾಳೆ.
ಇಂತಹಾ ಒಂದು ದಾರುಣ ಘಟನೆ ಮಧ್ಯ ಪ್ರದೇಶದ ರತ್ನಂ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನಂದ್ಲೇತ ಗ್ರಾಮದ ಘನಶ್ಯಾಮ ಎನ್ನುವ ದಿನಗೂಲಿ ಕೆಲಸಗಾರನ ನಾಲ್ಕು ವರ್ಷದ ಮಗಳು ಜೀಜಾ ಜ್ವರದಿಂದ ಬಳಲುತ್ತಿದ್ದಳು. ಆಕೆಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ದಾಗ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡಾಸ್ಪತ್ರೆಗೆ ಕರೆದೊಯ್ಯಬೇಕಾಗುವುದು ಎಂದಿದ್ದಾರೆ. ಘನಶ್ಯಾಮ ಆಸ್ಪತ್ರೆಗೆ ಮಗಳನ್ನು ಸಾಗಿಸಲು ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ ಎಂದು ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ಮನವಿ ಮಾಡಿದ್ದು ಅದಕ್ಕೆ ಅಧಿಕಾರಿಗಳು ನಿರಾಕರಿಸಿದ್ದಾರೆ.
ಆಗ ಘನಶ್ಯಾಮ ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿ ಅವನಿಂದ ಬೈಕ್ ಪಡೆದು ಅದೇ ಬೈಕಿನಲ್ಲಿ ಮೂವತ್ತು ಕಿಮೀ. ದೂರದ ಆಸ್ಪತ್ರೆಗೆ ಮಗಳನ್ನು ಕರೆತಂದಿದ್ದಾರೆ. ಆದರೆ ಆಸ್ಪತ್ರೆ ತಲುಪುವ ವೇಳೆಗಾಗಲೇ ಮಗಳು ಜೀಜಾ ಕೊನೆಯುಸಿರಿಳೆದಿದ್ದು ಆಕೆಯನ್ನು ಪರೀಕ್ಷಿಸಿದ್ದ ಆಸ್ಪತ್ರೆ ವೈದ್ಯರು ಇದನ್ನು ಖಚಿತಪಡಿಸಿದ್ದಾರೆ.
ಈ ಸಂಬಂಧ ಮಾದ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ರತ್ನಂ ಜಿಲ್ಲಾ ಕಲೆಕ್ಟರ್ ಸೋಮೇಶ್ ಮಿಶ್ರಾ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ. ಹಾಗೆ ತನಿಖೆ ನಡೆಸಿದ ವೇಳೆ ಜೀಜಾಳನ್ನು ದಾಖಲಿಸಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಒಂದೇ ಅಂಬುಲೆನ್ಸ್ ಮೂರು ತಿಂಗಳ ಹಿಂದೆಯೇ ಕೆಟ್ಟು ಹೋಗಿತ್ತು ಎಂದು ತಿಳಿದುಬಂದಿದ್ದು ಅಂಬುಲೆನ್ಸ್ ಸರಿಪಡಿಸುವಂತೆ ಮಾಡಿದ್ದ ಕೋರಿಕೆಯನ್ನು ಗುತ್ತಿಗೆದಾರರು ನಿರ್ಲಕ್ಷಿಸಿದ್ದರು ಎಂದು ಅಲ್ಲಿನ ಸಿಬ್ಬಂದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಅನೇಕ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಅನುಕೂಲತೆಗಳಿಲ್ಲ. ಇದನ್ನು ತಕ್ಷಣ ಸರಿಪಡಿಸಬೇಕೆಂದು ಜನರು ಆಗ್ರಹ ಮಾಡಿದ್ದಾರೆ.