ದೆಹಲಿ ಮುಖ್ಯ ಕಾರ್ಯದರ್ಶಿ ಹಲ್ಲೆ ಪ್ರಕರಣ: ಆಪ್ ಶಾಸಕನಿಂದ ಜಾಮೀನು ಅರ್ಜಿ, ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ
ಆಪ್ ಶಾಸಕರಿಂದ ಹಲ್ಲೆಗೊಳಗಾದ ದೆಹಲಿ ಮುಖ್ಯ ಕಾರ್ಯದರ್ಶಿ ಅಂಶ ಪ್ರಕಾಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ನವದೆಹಲಿ: ಆಪ್ ಶಾಸಕರಿಂದ ಹಲ್ಲೆಗೊಳಗಾದ ದೆಹಲಿ ಮುಖ್ಯ ಕಾರ್ಯದರ್ಶಿ ಅಂಶ ಪ್ರಕಾಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣದ ಪ್ರಮುಖ ಆರೋಪಿ ಮತ್ತು ಆಪ್ ಶಾಸಕ ಪ್ರಕಾಶ್ ಜರ್ವಾಲ್ ಅವರು ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಜಸ್ಟಿಸ್ ಮುಕ್ತಾ ಗುಪ್ತಾ ಅವರ ಪೀಠ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಅಂತೆಯೇ ಮಾರ್ಚ್ 7ರೊಳಗೆ ಪ್ರಕರಣದ ವಸ್ತುಸ್ಥಿತಿ ವರದಿ ಸಲ್ಲಿಕೆ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ನಿನ್ನೆಯಷ್ಟೇ ಇದೇ ಪ್ರಕರಣ ಸಂಬಂಧ ಶಾಸಕ ಪ್ರಕಾಶ್ ಜರ್ವಾಲ್ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ತಳ್ಳಿ ಹಾಕಿತ್ತು. ಈ ವೇಳೆ ಶಾಸಕ ಜರ್ವಾಲ್ ಬಹಿರಂಗವಾಗಿಯೇ 56 ವರ್ಷದ ಹಿರಿಯ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಶಾಸಕನನ್ನು ಮತ್ತಷ್ಟು ದಿನ ವಶಕ್ಕೆ ನೀಡಬೇಕು ಎಂದು ಹಿರಿಯ ವಕೀಲ ರೆಬೆಕ್ಕಾ ಎಂ ಜಾನ್ ವಾದ ಮಂಡಿಸಿದ್ದರು. ವಕೀಲರ ವಾದ ಆಲಿಸಿದ ನ್ಯಾಯಾಲಯ ಪ್ರಕಾಶ್ ಜರ್ನವಾಲ್ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.
ಇದನ್ನು ಪ್ರಶ್ನಿಸಿ ಶಾಸಕ ಪ್ರಕಾಶ್ ಜರ್ವಾಲ್ ಹೈಕೋರ್ಟ್ ಮೊರೆ ಹೋಗಿದ್ದರು. ಇನ್ನು ಇದೇ ಪ್ರಕರಣ ಸಂಬಂಧ ಮತ್ತೋರ್ವ ಆಪ್ ಶಾಸಕ ಅಮಾನತ್ತುಲ್ಲಾ ಖಾನ್ ಕೂಡ ಬಂಧಿತರಾಗಿದ್ದು, ಅವರ ಜಾಮೀನು ಅರ್ಜಿ ಕೂಡ ಶೀಘ್ರ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಜಾಹಿರಾತು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಗೆ ತೆರಳಿದ್ದ ದೆಹಲಿ ಮುಖ್ಯಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಆಪ್ ಶಾಸಕರು ಹಲ್ಲೆ ಮಾಡಿದ್ದರು. ಇದನ್ನು ವಿರೋಧಿಸಿದ್ದ ಐಎಎಸ್ ಅಧಿಕಾರಿಗಳ ಒಕ್ಕೂಟ ದೆಹಲಿ ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿತ್ತು.