ಐಎನ್ಎಕ್ಸ್ ಮೀಡಿಯಾ ಲಿಮಿಟೆಡ್'ನ ನಿರ್ದೇಶಕರಾದ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿ
ನವದೆಹಲಿ: ಕಾರ್ತಿ ಚಿದಂಬರಂ ಅವರ ಉದ್ಯಮಕ್ಕೆ ಸಹಾಯ ಮಾಡುವಂತೆ ಪಿ. ಚಿದಂಬರಂ ಅವರು ನಮ್ಮನ್ನು ಕೇಳಿದ್ದರು, ಚಿದಂಬರಂ ಅವರ ಮಾತಿನಂತೆಯೇ ನಾವು ಕಾರ್ತಿ ಚಿದಂಬರಂ ಅವರಿಗೆ ಯುಎಸ್'ಡಿ 7 ಬಿಲಿಯನ್'ರಷ್ಟು ಹಣವನ್ನು ನೀಡಿದ್ದೆವು ಎಂದು ಶೀನಾ ಬೋರಾ ಪ್ರಕರಣದಲ್ಲಿ ಜೈಲು ಸೇರಿರುವ ಐಎನ್ಎಕ್ಸ್ ಮೀಡಿಯಾ ಲಿಮಿಟೆಡ್'ನ ನಿರ್ದೇಶಕರಾದ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿಯವರು ಬುಧವಾರ ಹೇಳಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದ್ರಾಣಿ ಹಾಗೂ ಪೀಟರ್ ಮುಖರ್ಜಿಯವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ.
ಇಂದ್ರಾಣಿ ಹಾಗೂ ಪೀಟರ್ ಮುಖರ್ಜಿ ನಡೆಸುತ್ತಿದ್ದ ಮೀಡಿಯಾ ಕಂಪನಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ತೆರಿಗೆ ಇಲಾಖೆ 2007ರಲ್ಲಿ ಹೇಳಿತ್ತು. ಈ ಹಿನ್ನಲೆಯಲ್ಲಿ ಮೀಡಿಯಾ ಕಂಪನಿಗೆ ಅಗತ್ಯವಿದ್ದ ವಿದೇಶಿ ಬಂಡವಾಳಕ್ಕೆ ಹೂಡಿಕೆಗೆ ಅನುಮತಿ ನೀಡುವಂತೆ ಕೋರಿ ನಾರ್ಥ್ ಬ್ಲಾಕ್ ಕಚೇರಿಯಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿದ್ದೆವು. ಈ ವೇಳೆ ತಮ್ಮ ಪುತ್ರ ಕಾರ್ತಿ ಚಿದಂಬರಂ ಅವರ ಉದ್ಯಮಕ್ಕೆ ಸಹಾಯ ಮಾಡುವಂತೆ ಅವರು ತಿಳಿಸಿದ್ದರು ಎಂದು ಹೇಳಿಕೆಯಲ್ಲಿ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿ ಹೇಳಿಕೊಂಡಿದ್ದಾರೆ.