ದೇಶ

ಭೀಮಾ ಕೋರೆಗಾಂವ್‌ ಹಿಂಸಾಚಾರ: ಬುಧವಾರ ಮಹಾರಾಷ್ಟ್ರ ಬಂದ್‌ ಗೆ ದಲಿತ ಸಂಘಟನೆಗಳ ಕರೆ

Lingaraj Badiger
ಮುಂಬೈ: ಭಾರಿಪಾ ಬಹುಜನ ಮಹಾಸಂಘದ(ಬಿಬಿಎಂ) ಮುಖಂಡ ಪ್ರಕಾಶ್‌ ಅಂಬೇಡ್ಕರ್‌ ಅವರು ಭೀಮಾ ಕೋರೆಗಾಂವ್ ಸಂಗ್ರಾಮದ 200ನೇ ವಿಜಯೋತ್ಸವ ಮೆರವಣಿಗೆ ವೇಳೆ ಶಾಂತಿ–ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಮಹಾರಾಷ್ಟ್ರ ಬಂದ್‌ ಗೆ ಕರೆ ನೀಡಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ಅವರು, ನಿನ್ನೆ ಪುಣೆಯ ಕೋರೆಗಾಂವ್‌ ದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಹಿಂದೂ ಏಕ್ತಾ ಅಘಡಿ ಸಂಘಟನೆಯೇ ಕಾರಣ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರ ಪ್ರಜಾಸತ್ತಾತ್ಮಕ ಒಕ್ಕೂಟ, ಎಡಪಂಥೀಯ ಸಂಘಟನೆಗಳು ಸೇರಿದಂತೆ ನಾಳಿನ ಬಂದ್‌ 250ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದು, ಬಂದ್‌ ವೇಳೆ ಶಾಂತಿ ಕಾಪಾಡುವಂತೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರು ಜನತೆಗೆ ಕರೆ ನೀಡಿದ್ದಾರೆ. 
ಮರಾಠಿಗರ ಮತ್ತು ದಲಿತ ಮಧ್ಯೆ ಯಾವುದೇ ಸಂಘರ್ಷ ಇಲ್ಲ ಎಂದು ಸ್ಪಷ್ಟಪಡಿಸಿ ಪ್ರಕಾಶ್ ಅಂಬೇಡ್ಕರ್ ಅವರು, ಪರಿಸ್ಥಿತಿ ಅನನುಕೂಲವಾಗಿದ್ದರೆ, ನಾವು ವಿಜಯೋತ್ಸವ ಆಯೋಜಿಸುತ್ತಿರಲಿಲ್ಲ. ಸೋಮವಾರದ ವಿಜಯೋತ್ಸವವನ್ನು ಸಂಭಾಜಿ ಬ್ರಿಗೇಡ್‌(ಮರಾಠ ಸಂಸ್ಥೆ) ಆಯೋಜಿಸಿತ್ತು. ಹಿಂದೂ ಏಕ್ತಾ ಅಘಡಿ ಮತ್ತು ಶಿವರಾಜ್‌ ಪ್ರತಿಷ್ಠಾನದಿಂದಾಗಿ ಉತ್ಸವ ಹಿಂಸಾಚಾರಕ್ಕೆ ತಿರುಗಿತು ಎಂದು ಅವರು ವಿವರಿಸಿದ್ದಾರೆ.
ಕೋರೆಗಾಂವ್‌, ಶಿರೂರು ಮತ್ತು ಚಕನ್‌ ಹಳ್ಳಿಗಳ ಜನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಮತ್ತು ಸಹಾಯಧನವನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿದ ಪ್ರಕಾಶ್‌, ಕೋರೆಗಾಂವ್ ಹಿಂಸಾಚಾರದ ಕುರಿತು ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮಹಾರ್‌ ಸಮುದಾಯದ ಸೈನಿಕರು ಪೇಶ್ವೆಯ ಸೇನೆಯನ್ನು ಸೋಲಿಸಿದ ನೆನಪಿಗಾಗಿ ಭೀಮಾ ಕೋರೆಗಾಂವ್‌ ವಿಜಯೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದ್ದು, ಅದರಂತೆ ನಿನ್ನೆ ನಡೆದ ವಿಜಯೋತ್ಸವದ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇದರಿಂದ ಮಹಾರಾಷ್ಟ್ರದ ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಮುಂಬೈ, ಪುಣೆಯಲ್ಲಿ ಪ್ರತಿಭಟನೆಗಳ ಕಾವು ಹೆಚ್ಚಿದೆ.
SCROLL FOR NEXT