ಮುಂಬೈ: ಇತ್ತೀಚೆಗೆ ಮುಂಬೈನ ಕಮಲಾ ಮಿಲ್ಸ್ ರೆಸ್ಟೋರೆಂಟ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಪೊಲೀಸ್ ಪೇದೆಯೋರ್ವರು ಶೌರ್ಯ ಮೆರೆದಿರುವ ಫೋಟೋವೊಂದು ವೈರಲ್ ಆಗಿದ್ದು ಅವರ ಸಾಹಸಕ್ಕೆ ನೆಟಿಜೆನ್ಸ್ ಸೆಲ್ಯೂಟ್ ಮಾಡಿದ್ದಾರೆ.
ಡಿಸೆಂಬರ್ 29ರ ಮಧ್ಯರಾತ್ರಿ ನಡೆದ ಕಮಲಾ ಮಿಲ್ಸ್ ಮೊದಲನೇ ಮಹಡಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ರೆಸ್ಟೋರೆಂಟ್ ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಕೂಡಲೇ ಜಾಗೃತರಾದ ಮುಂಬೈ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು.
ಈ ವೇಳೆ ಪೊಲೀಸ್ ಪೇದೆ ಸುದರ್ಶನ ಶಿವಾಜಿ ಶಿಂಧೆ ತಮ್ಮ ಪ್ರಾಣವನ್ನು ಲೆಕ್ಕಿಸದೇ ಉರಿಯುತ್ತಿದ್ದ ಬೆಂಕಿ ಮಧ್ಯೆಯೇ ಒಳಗೆ ನುಗ್ಗಿ ಉಸಿರುಗಟ್ಟಿ ನರಳಾಡುತ್ತಿದ್ದವರನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು 8 ಜನರ ಪ್ರಾಣವನ್ನು ಉಳಿಸಿದ್ದರು.
ಸುದರ್ಶನ ಶಿವಾಜಿ ಶಿಂಧೆ ಮಹಿಳೆಯೋರ್ವಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಜೀವ ಉಳಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಫೋಟೋ ನೋಡಿದ ನೆಟಿಜೆನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೆಸ್ಟೋರೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 11 ಮಹಿಳೆಯರು ಸೇರಿದಂತೆ 14 ಜನರು ಸಾವನ್ನಪ್ಪಿದ್ದರು. ಇನ್ನು 21 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.