ದೇಶ

ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್ ಗೋಖಲೆ ನೇಮಕ

Srinivasamurthy VN
ನವದೆಹಲಿ: ಭಾರತದ ನೂತನ ವಿದೇಶಾಂಗ ಇಲಾಖೆಯ ನೂತನ ಕಾರ್ಯದರ್ಶಿಯಾಗಿ ಹಿರಿಯ ಅಧಿಕಾರಿ ವಿಜಯ್ ಗೋಖಲೆ ಅವರನ್ನು ನೇಮಕವಾಗಿದ್ದಾರೆ.
ಹಾಲಿ ವಿದೇಶಾಂಗ ಕಾರ್ಯದರ್ಶಿ ಎಸ್‌.ಜೈಶಂಕರ್‌ ಅವರ ಅಧಿಕಾರ ಅವಧಿ ಜನವರಿ 28ಕ್ಕೆ ಕೊನೆಗೊಳ್ಳಲಿರುವುದರಿಂದ ಅವರ ಸ್ಥಾನಕ್ಕೆ ವಿಜಯ್ ಗೋಖಲೆ ಅವರನ್ನು ನೇಮಕ ಮಾಡಲಾಗಿದೆ. ಭಾರತೀಯ ವಿದೇಶಾಂಗ  ಸೇವೆಗಳ (ಐಎಫ್‌ಎಸ್‌) ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ವಿಜಯ್‌ ಗೋಖಲೆ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದಾರೆ.
ಇನ್ನು ಇತ್ತೀಚೆಗೆ ಭಾರತ ಮತ್ತು ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ವಿವಾದವನ್ನು ಪರಿಹರಿಸುವಲ್ಲಿ ವಿಜಯ್ ಗೋಖಲೆ ಅವರ ಪಾತ್ರ ಮಹತ್ವದ್ದು ಎನ್ನಲಾಗಿದೆ. ಗೋಖಲೆ ಅವರು 1981ರ ಬ್ಯಾಚ್‌ನ  ಐಎಫ್ಎಸ್‌ ಅಧಿಕಾರಿಯಾಗಿದ್ದು, ಈ ಹಿಂದೆ ಗೋಖಲೆ ಚೀನಾಗೆ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು. 2013ರ ಅಕ್ಟೋಬರ್‌ನಿಂದ 2016ರ ಜನವರಿವರೆಗೆ ಜರ್ಮನಿಯಲ್ಲಿ ಉನ್ನತ ರಾಯಭಾರಿಯಾಗಿ ,  2016ರ ಜನವರಿ 20ರಿಂದ 2017ರ ಅಕ್ಟೋಬರ್ 21ರವರೆಗೆ ಚೀನಾದಲ್ಲಿ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದ 58 ವರ್ಷದ ಗೋಖಲೆ, ಈಗ ವಿದೇಶ ವ್ಯವಹಾರ ಸಚಿವಾಲಯದಲ್ಲಿ ಕಾರ್ಯದರ್ಶಿ(ಆರ್ಥಿಕ ಸಂಬಂಧ)ಯಾಗಿ  ಕರ್ತವ್ಯದಲ್ಲಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ ಗೋಖಲೆಯ ನೇಮಕಕ್ಕೆ ಅನುಮೋದನೆ ನೀಡಿದ್ದು ಅವರ ಸೇವಾವಧಿ 2 ವರ್ಷವಾಗಿರುತ್ತದೆ.
SCROLL FOR NEXT