ದೇಶ

ಹತ್ತನೇ ತರಗತಿಯಲ್ಲಿ ನಪಾಸ್? ಚಿಂತೆ ಇಲ್ಲ, ಪಂಜಾಬ್ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಬಹುದು!

Sumana Upadhyaya
ಚಂಡೀಗಢ: ಇಲ್ಲಿ ನೀವು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಅಥವಾ ಇಂಗ್ಲೀಷ್ ಯಾವುದೇ ವಿಷಯದಲ್ಲಿ ಹತ್ತನೇ ತರಗತಿಯಲ್ಲಿ ಪಾಸು ಆಗದಿದ್ದರೂ ಕೂಡ ಪಂಜಾಬ್ ನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. 
ಹೌದು ಇದು ತಮಾಷೆಯಲ್ಲ,  ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಬೋಧಿಸುವ ಮಾಡುವ ಶಿಕ್ಷಕರಲ್ಲಿ ಅನೇಕರು ಹತ್ತನೇ ತರಗತಿ ಕೂಡ ತೇರ್ಗಡೆ ಹೊಂದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರದಿಂದ ನೇಮಕಾತಿಗೊಂಡ ಶಿಕ್ಷಕರು ಸೂಕ್ತ ಶೈಕ್ಷಣಿಕ ಅರ್ಹತೆ ಪಡೆದಿಲ್ಲ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಪಂಜಾಬ್ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರ ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಫೆರೊಜ್ ಪುರ್ ಜಿಲ್ಲೆಯ ಮೊಹ್ರೆವಾಲ ಗ್ರಾಮದ ಸರ್ಪಂಚ್ ಹರ್ ಪ್ರೀತ್ ಸಿಂಗ್ ಸಂಧು ಪ್ರಶ್ನೆ ಕೇಳಿದ್ದರು. ಅವರು ಸರ್ಕಾರೇತರ ಸಂಘಟನೆಯ ಉಪಾಧ್ಯಕ್ಷ ಕೂಡ ಹೌದು. ಶಾಲೆಗಳಲ್ಲಿ ಮಕ್ಕಳ ಸಾಧನೆ ಬಗ್ಗೆ ಕಂಡುಹಿಡಿಯಲು ಪ್ರಯತ್ನಿಸಿದಾಗ ವಿದ್ಯಾರ್ಥಿಗಳು ಕಳಪೆ ಮಟ್ಟದ ಸಾಧನೆ ಮಾಡುತ್ತಿರುವುದು ತಿಳಿದುಬಂದಿದೆ. ಪೋಷಕರು ಕೂಡ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಮನಸ್ಸು ಮಾಡುತ್ತಿಲ್ಲ.
ಇಲ್ಲಿಯವರೆಗೆ ಪಂಜಾಬ್ ನ 10 ಜಿಲ್ಲೆಗಳಿಂದ ಮಾತ್ರ ಮಾಹಿತಿ ಸಿಕ್ಕಿದ್ದು, ವಿವಿಧ ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುವ 313 ಶಿಕ್ಷಕ-ಶಿಕ್ಷಕಿಯರು ಹತ್ತನೇ ತರಗತಿಯಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ತೇರ್ಗಡೆ ಹೊಂದಿಲ್ಲ. 
ಪಂಜಾಬ್ ನ ಮೊಗಾದಲ್ಲಿ ಸರ್ಕಾರಿ ಶಾಲೆಗಳಲ್ಲಿ ಬೋಧಿಸುವ 59 ಬೋಧಕರಲ್ಲಿ 31 ಶಿಕ್ಷಕರು ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾದವರು. ಈ ವರ್ಷ ಸುಮಾರು 1 ಲಕ್ಷ ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಮತ್ತು ಸುಮಾರು 70,000 ಮಂದಿ ಇಂಗ್ಲಿಷ್ ನಲ್ಲಿ ಅನುತ್ತೀರ್ಣರಾಗಿದ್ದಾರೆ.
ಮುಕ್ತ್ ಸಾರ್ ನಲ್ಲಿ 50 ಶಿಕ್ಷಕರಲ್ಲಿ 28 ಮಂದಿ ಗಣಿತ ವಿಷಯದಲ್ಲಿ, 9 ಶಿಕ್ಷಕರು ಇಂಗ್ಲಿಷ್ ನಲ್ಲಿ, ಮೂವರು ವಿಜ್ಞಾನದಲ್ಲಿ, 10 ಮಂದಿ ಸಮಾಜ ವಿಜ್ಞಾನದಲ್ಲಿ ಅನುತ್ತೀರ್ಣರಾಗಿದ್ದಾರೆ. ಫೆರೊಝೆಪುರ್ ದಲ್ಲಿ 46 ಮಂದಿ ಶಿಕ್ಷಕರು ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು. ಫಜಿಕಾದಲ್ಲಿ ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ 31 ಶಿಕ್ಷಕರು ಕೂಡ ಹತ್ತನೇ ತರಗತಿ ತೇರ್ಗಡೆಯಾಗಿಲ್ಲ. ಫೆರೊಜೆಪುರದಲ್ಲಿ 46 ಶಿಕ್ಷಕರು ಶೈಕ್ಷಣಿಕವಾಗಿ ಅರ್ಹತೆಯುಳ್ಳವರಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಗೊತ್ತಾಗಿದೆ.
SCROLL FOR NEXT