ನವದೆಹಲಿ: 2009ರಲ್ಲಿ ನಡೆದಿದ್ದ ಜಿಗಿಶಾ ಘೊಷ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ದೆಹಲಿ ಹೈಕೋರ್ಟ್ ತೀರ್ಪು ನಿಡಿದೆ.
ಎಸ್ ಮುರಳೀಧರ್ ಮತ್ತು ಐ ಎಸ್ ಮೆಹ್ತಾ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದ್ದು ಮೂರನೇ ಆರೋಪಿಗೆ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದ್ದಾರೆ.
ಜಿಗಿಶಾ ಘೊಷ್ ಅಪಹರಣ ಹಾಗೂ ಕೊಲೆ ಆರೋಪದಡಿ ರವಿ ಕಪೂರ್, ಅಮಿತ್ ಶುಕ್ಲಾ ಮತ್ತು ಬಲ್ಜೀತ್ ಸಿಂಗ್ ಮಲಿಕ್ ಆರೋಪಿಗಳಾಗಿದ್ದು ಈ ಹಿಂದೆ ವಿಶೇಷ ನ್ಯಾಯಾಲಯವು ರವಿ ಕಪೂರ್, ಅಮಿತ್ ಶುಕ್ಲಾ ಅವರುಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಮೂರನೇ ಅಪರಾಧಿ ಬಲ್ಜೀತ್ ಸಿಂಗ್ ನ ಸನ್ನಡತೆಯ ಕಾರಣ ಜೀವಾವಧಿ ಶಿಕ್ಷೆಗೆ ಗುರಿಮಾಡಲಾಗಿತ್ತು. ಇದೀಗ ದೆಹಲಿ ಹೈಕೋರ್ಟ್ ಮೊದಲೆರಡೂ ಆರೋಪಿಗಳಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ.
ಜಿಗಿಶಾ ಘೊಷ್ (28) ಹೆವಿಟ್ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಕೆಯನ್ನು ದಕ್ಷಿಣ ದಿಲ್ಲಿಯ ವಸಂತ್ ವಿಹಾರ್ ಪ್ರದೇಶದಿಂದ ಮಾರ್ಚ್ 18, 2009ರಂದು ಅಪಹರಿಸಿ ಹತ್ಯೆ ಮಾಡಲಾಗಿತ್ತು. ಮಾರ್ಚ್ 20 2009ರಂದು ಹರಿಯಾಣದ ಸೂರಜ್‌ಖುಂಡ್‌ನಲ್ಲಿ ಜಿಗಿಶಾ ಮೃತದೇಹ ಪತ್ತೆಯಾಗಿತ್ತು. ಈ ಕೊಲೆ ಪ್ರಕರಣದ ಹಿಂದೆ ದರೋಡೆಯ ಉದ್ದೇಶವಿದೆ ಎಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದರು.