ದೇಶ

ಸಿಎಂ ಯೋಗಿ ರಾಜ್ಯದಲ್ಲಿ ಮುಂದುವರೆದ ಕೇಸರಿ ಕ್ರಾಂತಿ: ಹಜ್ ಕಚೇರಿಗೂ ಕೇಸರಿ ಬಣ್ಣ

Manjula VN
ನವದೆಹಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕಾರ ನಡೆಸುತ್ತಿರುವ ಉತ್ತರಪ್ರದೇಶ ರಾಜ್ಯದಲ್ಲಿ ಕೇಸರಿ ಕ್ರಾಂತಿ ಮುಂದುವರೆದಿದ್ದು, ಇದೀಗ ಹಚ್ ಕಚೇರಿಗಳೂ ಕೇಸರಿ ಬಣ್ಣವನ್ನು ಹಚ್ಚಲಾಗಿದೆ. 
ಹಸಿರು ಹಾಗೂ ಬಿಳಿ ಬಣ್ಣದಲ್ಲಿದ್ದ ಹಜ್ ಕಚೇರಿಯ ಮುಂಭಾಗದ ಗೋಡೆಗಳಿಗೆ ಇದೀಗ ಕೇಸರಿ ಬಣ್ಣವನ್ನು ಹಚ್ಚಲಾಗಿದ್ದು, ಸರ್ಕಾರದ ಈ ನಡೆಗೆ ವಿರೋಧ ಪಕ್ಷಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು, ದಾರೂಲ್ ಉಲುಮ್ ವಿರೋಧ ವ್ಯಕ್ತಪಡಿಸುತ್ತಿವೆ. 
ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಗೆ ಕೇಸರಿ ಬಣ್ಣವನ್ನು ಹಚ್ಚಲಾಗಿತ್ತು. ಸಚಿವಾಲಯ ಇರುವ 5 ಅಂತಸ್ತಿನ ಲಾಲ್ ಬಹದ್ದೂರ್ ಶಾಸ್ತ್ರಿ ಭವನದ ಕಟ್ಟಡದಲ್ಲಿ ಮುಖ್ಯಮಂತ್ರಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳ ಕಚೇರಿಗಳಿದ್ದು, ಈ ಕಟ್ಟಡಕ್ಕೆ ಸಾಮಾನ್ಯವಾಗಿ ಬಿಳಿ ಮತ್ತು ನೀಲಿ ಬಣ್ಣವನ್ನು ಹಚ್ಚಲಾಗುತ್ತಿತ್ತು. ಆದರೆ, ಯೋಗಿ ಆದಿತ್ಯನಾಥ್ ಅವರು ಅಧಿಕಾರಕ್ಕೆ ಬಂದ ಬಳಿಕ ಕೇಸರಿ ಬಣ್ಣವನ್ನು ಬಳಿಯಲಾಗಿತ್ತು. 
ಹಜ್ ಕಚೇರಿಗೆ ಕೇಸರಿ ಬಣ್ಣ ನೀಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಸಚಿವ ಮೊಹ್ಸಿನ್ ರಾಜಾ ಅವರು, ಇದರಲ್ಲಿ ವಿವಾದ ಹುಟ್ಟುಹಾಕುವ ಅಗತ್ಯವಿಲ್ಲ. ಕೇಸರಿ ಶಕ್ತಿಯುತವಾಗಿದ್ದು, ಪ್ರಕಾಶಮಾನವಾದ ಬಣ್ಣವಾಗಿದೆ. ಕಟ್ಟಡಕ್ಕೆ ಕೇಸರಿ ಬಣ್ಣ ನೀಡುವುದರಿಂದ ಚೆನ್ನಾಗಿ ಕಾಣುತ್ತದೆ. ನಮ್ಮ ವಿರುದ್ಧ ದನಿ ಎತ್ತಲು ವಿರೋಧ ಪಕ್ಷಗಳಿಗೆ ಬೇರಾವುದೇ ವಿಚಾರಗಳು ಸಿಗಲಿಲ್ಲ. ಹೀಗಾಗಿ ವಿವಾದವನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ. 
SCROLL FOR NEXT