ದೇಶ

ಮೇವು ಹಗರಣ; ಲಾಲು ಜೈಲು ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ: ಆರ್ ಜೆಡಿ

Lingaraj Badiger
ರಾಂಚಿ: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ವಿಶೇಷ ಕೋರ್ಟ್ 3.5 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಶನಿವಾರ ಆರ್ ಜೆಡಿ ಹೇಳಿದೆ.
ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದ ಕೆಲವೇ ಕ್ಷಣಗಳಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಲಾಲು ಪ್ರಸಾದ್ ಯಾದವ್ ಅವರ ಪುತ್ರ ಹಾಗೂ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ನ್ಯಾಯಾಂಗ ತನ್ನ ಕರ್ತವ್ಯ ಮಾಡಿದೆ. ತೀರ್ಪಿನ ಪ್ರತಿ ಸಿಕ್ಕ ಬಳಿಕ ನಾವು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ ಮತ್ತು ಜಾಮೀನಿಗೂ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ಸಿಗುತ್ತೆ ಎಂಬ ವಿಶ್ವಾಸವಿದೆ. ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಲಾಲು ಅವರ ಮತ್ತೊಬ್ಬ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪಾಲ್ ಸಿಂಗ್ ಅವರು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದು, ಲಾಲುಗೆ 3.5 ವರ್ಷ ಜೈಲು ಹಾಗೂ 5 ಲಕ್ಷ ರುಪಾಯಿ ದಂಡ ವಿಧಿಸಿದ್ದಾರೆ. 
SCROLL FOR NEXT