ಜೈಪುರ: ಈ ಹಿಂದೆ ಆಮ್ಲಜನಕವನ್ನು ಒಳಗೆ ತೆಗೆದುಕೊಂಡು ಆಮ್ಲಜನಕವನ್ನು ಹೊರ ಬಿಡುವ ಏಕೈಕ ಪ್ರಾಣಿ ಗೋವು ಎಂದು ಹೇಳಿದ್ದ ರಾಜಸ್ಥಾನ ಶಿಕ್ಷಣ ಸಚಿವ ವಾಸುದೇವ್ ದೇವನಾನಿ ಅವರು ಈಗ ಖ್ಯಾತ ವಿಜ್ಞಾನಿ ಐಸಾಕ್ ನ್ಯೂಟನ್ ಗುರುತ್ವಾಕರ್ಷಣೆ ಸೂತ್ರ ಕಂಡು ಹಿಡಿಯುವ ಒಂದು ಸಾವಿರ ವರ್ಷಗಳ ಹಿಂದಯೇ ಎರಡನೇ ಬ್ರಹ್ಮಗುಪ್ತ ಅದನ್ನು ಕಂಡು ಹಿಡಿದಿದ್ದ ಎಂದು ಹೇಳಿದ್ದಾರೆ.
ನಿನ್ನೆ ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ದೇವನಾನಿ, ನಾವು ಎಲ್ಲಾ ನ್ಯೂಟನ್ ಗುರುತ್ವಾಕರ್ಷಣೆ ಸೂತ್ರ ಕಂಡು ಹಿಡಿದ ಅಂತ ಓದಿದ್ದೇವೆ. ಆದರೆ ನೀವು ಇನ್ನೂ ಆಳಕ್ಕಿಳಿದು ಅಭ್ಯಾಸ ಮಾಡಿದರೆ ಈ ಸೂತ್ರವನ್ನು ಎರಡನೇ ಬ್ರಹ್ಮಗುಪ್ತ ನ್ಯೂಟನ್ ಗಿಂತ ಒಂದು ಸಾವಿರ ವರ್ಷಗಳ ಹಿಂದೆಯೇ ಅದನ್ನು ಕಂಡು ಹಿಡಿದ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಈ ಸತ್ಯವನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಏಕೆ ಸೇರಿಸಲಾಗಿಲ್ಲ? ಎಂದು ರಾಜಸ್ಥಾನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ದೇವನಾನಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಂದನೇ ತರಗತಿಯಿಂದ 12ನೇ ತರಗತಿಯವರೆಗೆ ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ತರಲಾಗಿದೆ. ಹಲವು ವರ್ಷಗಳ ಕಾಲ ರಾಜಸ್ಥಾನದಲ್ಲಿ ಅಕ್ಬರ್ ಒಬ್ಬ ಮಹಾನ್ ದೊರೆಯಾಗಿದ್ದ ಎಂಬ ಪಾಠವಿತ್ತು. ಈಗ ಅದನ್ನು ನಾವು ಬದಲಾವಣೆ ಮಾಡಿದ್ದು, ಮಹಾರಾಣಾ ಪ್ರತಾಪ್ ಬಗೆಗಿನ ಪಾಠ ಸೇರಿಸಿದ್ದೇವೆ ಎಂದಿದ್ದಾರೆ.