ನವದೆಹಲಿ: 2018-19 ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕೇಂದ್ರದ ಎನ್ ಡಿ ಎ ಸರ್ಕಾರ ಪೂರ್ಣ ಪ್ರಮಾಣದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮೋದಿ ಸರ್ಕಾರ ಬಜೆಟ್ ನಲ್ಲಿ ಮಧ್ಯಮವರ್ಗದ ಓಲೈಕೆಗೆ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ.
ಮಧ್ಯಮ ವರ್ಗದ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡುವ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ಆರಂಭಿಸಿದ್ದು, ಆರೋಗ್ಯ ವಿಮೆಯಲ್ಲಿ ಹೆಚ್ಚುವರಿ ಸೌಲಭ್ಯ, ಆಕರ್ಷಣೆ ಕಳೆದುಕೊಂಡಿರುವ ಸ್ಥಿರ ಠೇವಣಿ ಹೂಡಿಕೆಗೆ ಪ್ರೋತ್ಸಾಹ, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಕುರಿತು ಹೊಸ ಕೊಡುಗೆಗಳನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಪ್ರಸ್ತುತ ಇರುವ ವಿವಿಧ ಶ್ರೇಣಿಯ ಜಿಎಸ್ ಟಿ ತೆರಿಗೆ ಮಿತಿಯನ್ನು ಕಡಿತಗೊಳಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆಯಲ್ಲಿ ತೊಡಗಿದ್ದು, ಪ್ರಸ್ತುತ ತೆರಿಗೆ ವ್ಯಾಪ್ತಿಯಲ್ಲಿರುವ ಕೆಲ ಅಗತ್ಯ ವಸ್ತುಗಳನ್ನು ತೆರಿಗೆ ವಿನಾಯಿತಿ ಪಟ್ಟಿಗೆ ಸೇರುವ ಕುರಿತೂ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ.
ಇನ್ನು ಹಾಲಿ ಇರುವ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5ಲಕ್ಷಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರದ ಸಿದ್ಧವಿದ್ದು, ಪ್ರಮುಖವಾಗಿ ತಿಂಗಳ ವೇತನ ಆಧಾರಿತ ಕುಟುಂಬಗಳ ಓಲೈಕೆಗಾಗಿ ಕೇಂದ್ರ ಸರ್ಕಾರ ಕಸರತ್ತು ಆರಂಭಿಸಿದೆ. 2.5ರಿಂದ 5 ಲಕ್ಷ ರು ವರೆಗಿನ ಆದಾಯ ಹೊಂದಿರುವವರಿಗೆ ಶೇ.10ರಷ್ಟಿರುವ ಆದಾಯ ತೆರಿಗೆ ಪ್ರಮಾಣವನ್ನು ಶೇ.5ಕ್ಕೆ ಇಳಿಕೆ ಮಾಡುವ ಕುರಿತು ಕೇಂದ್ರ ಸರ್ಕಾರ ಚಿಂತನೆಯಲ್ಲಿದ್ದು, ಆ ಮೂಲಕ ಸಣ್ಣ ಪ್ರಮಾಣದ ತೆರಿಗೆ ಪಾವತಿದಾರರಿಗೆ ರಿಲೀಫ್ ನೀಡುವ ಕುರಿತು ಚರ್ಚೆ ನಡೆಸಿದೆ. ಅಂತೆಯೇ 5 ಮತ್ತು 10 ಲಕ್ಷ ರುಗಳ ಆದಾಯ ಹೊಂದಿರುವವರ ತೆರಿಗೆ ಪ್ರಮಾಣ ಶೇ.20ಕ್ಕೆ ಮತ್ತು 20ಲಕ್ಷಕ್ಕೂ ಅಧಿಕ ಆದಾಯ ಹೊಂದಿರುವವರಿಗೆ ಶೇ.30ರಷ್ಟು ಆದಾಯ ತೆರಿಗೆ ಹೇರುವ ಕುರಿತು ಸರ್ಕಾರ ಚಿಂತನೆಯಲ್ಲಿ ತೊಡಗಿದೆ.
ಆದರೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರ 'ಆಕರ್ಷಕ ಬಜೆಟ್' ಗೆ ಸಂಪನ್ಮೂಲದ ಕೊರತೆ ಸಮಸ್ಯೆ ಎದುರಾಗಿದ್ದು, ಈ ವರ್ಷ ನಿರೀಕ್ಷೆಗೂ ಮೀರಿ ಕಡಿಮೆ ಪ್ರಮಾಣದಲ್ಲಿ ಕಾರ್ಪೋರೆಟ್ ತೆರಿಗೆ ಸಂಗ್ರಹವಾಗಿದೆ. ಇನ್ನು ಪ್ರಸಕ್ತ ಸಾಲಿನ ಜಿಎಸ್ ಟಿ ತೆರಿಗೆ ಮುಂದಿನ ವರ್ಷ ಸಂಗ್ರಹವಾಗುವುದರಿಂದ ವಿತ್ತೀಯ ಸಂಪನ್ಮೂಲಕ್ಕಾಗಿ ಸರ್ಕಾರ ಶೋಧ ನಡೆಸುವ ಅನಿವಾರ್ಯತೆ ಎದುರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics