ದೇಶ

ಶಿಷ್ಟಾಚಾರ ಬದಿಗಿರಿಸಿ ಇಸ್ರೇಲ್ ಪ್ರಧಾನಿಯನ್ನು ಸ್ವಾಗತಿಸಲಿರುವ ಪ್ರಧಾನಿ ಮೋದಿ

Srinivas Rao BV
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಸ್ನೇಹಿತ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಭೇಟಿ ನೀಡುತ್ತಿದ್ದು, ಶಿಷ್ಟಾಚಾರವನ್ನು ಬದಿಗಿರಿಸಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣಕ್ಕೆ ತೆರಳಿ ಇಸ್ರೇಲ್ ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ. 
ಜ.14 ರಂದು ಮಧ್ಯಾಹ್ನ ನೇತನ್ಯಾಹು ಹಾಗೂ ಅವರ ಪತ್ನಿ ಭಾರತಕ್ಕೆ ಆಗಮಿಸಲಿದ್ದು, 15 ವರ್ಷಗಳ ನಂತರ ಇಸ್ರೇಲ್ ನ ಪ್ರಧಾನಿಯೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇಸ್ರೇಲ್ ಗೆ ಪ್ರಧಾನಿ ನರೇಂದ್ರ ಮೋದಿ ಜುಲೈ ನಲ್ಲಿ ಭೇಟಿ ನೀಡಿದ್ದಾಗ ಇಸ್ರೇಲ್ ಪ್ರಧಾನಿ ನೇತನ್ಯಾಹು ಸಹ ಶಿಷ್ಟಾಚಾರ ಬದಿಗಿರಿಸಿ ನಮ್ಮ ಪ್ರಧಾನಿಯನ್ನು ಸ್ವಾಗತಿಸಿದ್ದರು. ಅಷ್ಟೇ ಅಲ್ಲದೇ ಅಮೆರಿಕ ಅಧ್ಯಕ್ಷರು ಹಾಗೂ ಧಾರ್ಮಿಕ ಗುರುಗಳಿಗೆ (ಪೋಪ್)ಗೆ ಸಲ್ಲುವಂತಹ ಪರಮೋಚ್ಛ ಗೌರವ ನೀಡುವ ಮೂಲಕ ಸ್ವಾಗತಿಸಿದ್ದರು.  
ಇಸ್ರೇಲ್ ಪ್ರಧಾನಿ ಭಾರತಕ್ಕೆ ಆಗಮಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತೀನ್ ಮೂರ್ತಿ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಶತಮಾನದ ಹಿಂದೆ ಭಾರತದ ಮೂರು ರೆಜಿಮೆಂಟ್ ಗಳು ಹೈಫಾ ಯುದ್ಧದಲ್ಲಿ ವಹಿಸಿದ್ದ ಪಾತ್ರದ ಸ್ಮರಣಾರ್ಥವಾಗಿ ಈ ಸ್ಮಾರಕ ನಿರ್ಮಿಸಲಾಗಿದ್ದು, ತೀನ್ ಮೂರ್ತಿ ಹೈಫಾ ಚೌಕ್ ಎಂದು ಮರುನಾಮಕರಣ ಮಾಡಲಾಗುತ್ತದೆ, ತೀನ್ ಮೂರ್ತಿ ಮಾರ್ಗ್ ಇನ್ನು ಮುಂದೆ ತೀನ್ ಮೂರ್ತಿ ಹೈಫಾ ಮಾರ್ಗ್ ಎಂದು ಕರೆಯಲ್ಪಡುತ್ತದೆ. 
ಪ್ರಧಾನಿ ನರೇಂದ್ರ ಮೋದಿ ನೇತನ್ಯಾಹು ಹಾಗೂ ಅವರ ಪತ್ನಿಗೆ ರಾತ್ರಿ ಔತಣ ಕೂಟ ಏರ್ಪಡಿಸಿದ್ದಾರೆ. ಇಸ್ರೇಲ್ ಪ್ರಧಾನಿ ತಾಜ್ ಮಹಲ್ ಗೂ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. 
SCROLL FOR NEXT