ನವದೆಹಲಿ: ದೇಶವ್ಯಾಪಿ ತೀವ್ರ ಚರ್ಚೆಗೆ ಗುರಿಯಾಗಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಸಮಾಧಾನ ವಿವಾದ ಇನ್ನೂ ಬಗೆಹರಿದಿಲ್ಲ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ತಿರುಗಿಬಿದಿದ್ದ ನಾಲ್ಕು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇನ್ನೂ ತಮ್ಮ ಬಂಡಾಯವನ್ನು ಬಿಟ್ಟಿಲ್ಲ.. ಹೀಗಾಗಿ ನ್ಯಾಯಾಧೀಶರ ನಡುವಿನ ವಿರಸ ಮುಂದುವರೆದಿದ್ದು, ಬಿಕ್ಕಟ್ಟು ಶಮನಕ್ಕೆ ಇನ್ನೂ 2-3 ದಿನಗಳಾಗಬಹುದು ಎಂದು ಆಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು, ಸಮಸ್ಯೆ ಇನ್ನೂ ಬಗೆಹರಿದಿಲ್ಲ.. ಇನ್ನು 2-3 ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಇದೇ ಕೆಕೆ ವೇಣುಗೋಪಾಲ್ ಅವರು, ನ್ಯಾಯಾಧೀಶರ ಸಮಸ್ಯೆಯನ್ನು ಆಂತರಿಕವಾಗಿ ಇತ್ಯರ್ಥಪಡಿಸಲಾಗಿದೆ. ಇನ್ನಾವ ಸಮಸ್ಯೆಯೂ ಇಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕೂಡ ಬಂಡಾಯ ಶಮನಗೊಳಿಸುವ ಕುರಿತು ಭರವಸೆ ನೀಡಿತ್ತು. ಆದರೆ ಮತ್ತೆ ಸಮಸ್ಯೆ ಮುಂದುವರೆದಿದೆ.