ನವದೆಹಲಿ: ಲಾಭದಾಯಕ ಹುದ್ದೆ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ತೀವ್ರ ಹಿನ್ನಡೆಯಾಗಿದ್ದು, ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಚುನಾವಣಾ ಆಯೋಗ ಅನರ್ಹಗೊಳಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಲಾಭದಾಯಕ ಹುದ್ದೆ ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ 20 ಶಾಸಕರನ್ನು ಚುನಾವಣಾ ಆಯೋಗ ಅನರ್ಹಗೊಳಿಸಲು ಶಿಫಾರಸ್ಸು ಮಾಡಿದ್ದು, ಈಗಾಗಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ತನ್ನ ವರದಿಯನ್ನು ಸಲ್ಲಿಕೆ ಮಾಡಿದೆ. 2016ರ ಜೂನ್ 9ರಂದು ಆಪ್ ವಿರುದ್ಧ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿತ್ತು. ಆಪ್ 21 ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.
ಈ ಬಗ್ಗೆ ದೂರು ಸ್ವೀಕರಿಸಿದ್ದ ಆಯೋಗ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷದಿಂದ ಸ್ಪಷ್ಟನೆ ಕೂಡ ಕೇಳಿತ್ತು. ತಮ್ಮ ವಿರುದ್ಧ ಪ್ರಕರಣವನ್ನು ಕೈ ಬಿಡುವಂತೆ ಆಪ್ ನ ಶಾಸಕರು ಆಯೋಗಕ್ಕೆ ಮನವಿ ಮಾಡಿದ್ದರಾದರೂ, ಆಯೋಗ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. 2015ರ ಮಾರ್ಚ್ ತಿಂಗಳಲ್ಲಿ ಆಯೋಗ ನಿರ್ಧಾರಕ್ಕೆ ವಿರುದ್ಧವಾಗಿ ದೆಹಲಿ ಸರ್ಕಾರ ತಿದ್ದುಪಡಿ ಮಸೂದೆ (ದೆಹಲಿ ಶಾಸನಸಭೆಯ ಸದಸ್ಯರು (ಅನರ್ಹೀಕರಣವನ್ನು ತೆಗೆಯುವುದು) ಕಾಯಿದೆ, 1997)ಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದಿತ್ತಾದರೂ, ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿರಲಿಲ್ಲ. ಲೆಫ್ಟಿನೆಂಟ್ ಗವರ್ನರ್ ಅವರ ಅನುಮೋದನೆ ಅಲ್ಲದ ತಿದ್ದುಪಡಿ ಮಸೂದೆಗೆ ಅಂಗೀಕಾರ ಹಾಕುವ ಪ್ರಶ್ನೆಯೇ ಇಲ್ಲ ಎಂದು ಮಸೂದೆಯನ್ನು ವಾಪಸ್ ಕಳಿಸಿತ್ತು.
ಇನ್ನು ಆಪ್ ನ ಶಾಸಕರಾಗಿದ್ದ ಜರ್ನಲ್ ಸಿಂಗ್ ವಿರುದ್ಧ ದಾಖಲಾಗಿದ್ದ ಪ್ರಕರಣ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರ ವಿರುದ್ಧದ ಪ್ರಕರಣ ಕೈ ಬಿಡಲಾಗಿತ್ತು.