ದೇಶ

ನಾನು ಹಿಂದು ವಿರೋಧಿಯಲ್ಲ, ಮೋದಿ, ಅಮಿತ್ ಶಾ, ಹೆಗಡೆ ವಿರೋಧಿ: ನಟ ಪ್ರಕಾಶ್ ರಾಜ್

Manjula VN
ಹೈದರಾಬಾದ್: ನಾನು ಹಿಂದು ವಿರೋಧಿಯಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರೋಧಿ ಎಂದು ನಟ ಪ್ರಕಾಶ್ ರಾಜ್ ಅವರು ಗುರುವಾರ ಹೇಳಿದ್ದಾರೆ. 
ಹೈದರಾಬಾದ್'ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕೆಲವರು ನನ್ನನ್ನು ಹಿಂದು ವಿರೋಧಿ ಎಂದು ಹೇಳುತ್ತಿದ್ದಾರೆ. ನಾನು ಹಿಂದು ವಿರೋಧಿಯಲ್ಲ, ನಾನು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಹಗೆಡೆ ವಿರೋಧಿ ಎಂದು ಹೇಳಿದ್ದಾರೆ. 
ಹಂತಕರಿಗೆ ಬೆಂಬಲ ನೀಡುವವರನ್ನು ಹಿಂದೂಗಳೆಂದು ಕರೆಯಲು ಸಾಧ್ಯವಿಲ್ಲ. ಪ್ರಗತಿಪರ ಚಿಂತಕಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾದಾಗ ಮೋದಿಯವರ ಕೆಲ ಬೆಂಬಲಿಕರು ಸಂಭ್ರಮವನ್ನು ಆಚರಿಸಿದ್ದರು. ಈ ವೇಳೆ ಮೌನ ಮುರಿದು ಮಾತನಾಡುವಂತೆ ಮೋದಿಯವರ ಬಳಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಮೋದಿಯವರು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಲಿಲ್ಲ. ನಿಜವಾದ ಹಿಂದೂ ಈ ರೀತಿಯ ಚಟುವಟಿಕೆಗಳಿಗೆ ಬೆಂಬಲವನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ. 
ಪ್ರಕಾಶ್ ರಾಜ್ ಅವರು ಹೇಳಿಕೆ ನೀಡುತ್ತಿದ್ದಂತೆಯೇ ತೆಲಂಗಾಣ ಬಿಜೆಪಿ ವಕ್ತಾರ ಕೃಷ್ಣ ಸಾಗರ್ ರಾವ್ ಅವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಪ್ರಕಾಶ್ ರಾಜ್ ಅವರು, ನನ್ನನ್ನು ನೀವು ಹಿಂದೂ ವಿರೋಧಿ ಎಂದು ಹೇಳುತ್ತೀರಾದರೆ, ನೀವು ಹಿಂದೂ ವಿರೋಧಿ ಎಂದು ಹೇಳುವ ಎಲ್ಲಾ ಹಕ್ಕು ನನಗಿದೆ ಎಂದಿದ್ದಾರೆ. 
SCROLL FOR NEXT