ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ ಪಕ್ಷದ 20 ಶಾಸಕರ ಅನರ್ಹತೆಗೆ ಚುನಾವಣಾ ಆಯೋಗ ಶಿಫಾರಸ್ಸು ಮಾಡಿದ್ದು, ಈ ಶಿಫಾರಸ್ಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅನುಮೋದನೆ ನೀಡಿದ್ದೇ ಆದರೆ ಈ ಶಾಸಕರ ಶಾಸಕತ್ವ ಅನರ್ಹಗೊಳ್ಳಲಿದೆ. ಆಗ ಈ ಶಾಸಕರ ಕ್ಷೇತ್ರಗಳಲ್ಲಿ ಮತ್ತೆ ಉಪ ಚುನಾವಣೆ ನಡೆಯಲಿದೆ.
ಇಷ್ಟಕ್ಕೂ ಏನಿದು ಲಾಭದಾಯಕ ಹುದ್ದೆ ಬಿಕ್ಕಟ್ಟು..?
2015ರಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ತನ್ನ 21 ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿತ್ತು. ಇದು ಲಾಭದಾಯಕ ಹುದ್ದೆಯಾಗಿದ್ದು, ಸಂವಿಧಾನದ ಅಂಶ ಉಲ್ಲಂಘಸಿದಂತಾಗುತ್ತದೆ ಎಂದು ವಕೀಲರೊಬ್ಬರು ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದ ರಾಷ್ಟ್ರಪತಿಗಳು ಆಯೋಗದ ಅಭಿಪ್ರಾಯ ಕೇಳಿದ್ದರು. ಇದೀಗ ಚುನಾವಣಾ ಆಯೋಗ ತನ್ನ ವರದಿ ನೀಡಿದ್ದು, ವರದಿಯಲ್ಲಿ ಲಾಭದಾಯಕ ಹುದ್ದೆ ಹೊಂದಿರುವ ಆಪ್ 20 ಶಾಸಕರನ್ನು ಅನರ್ಹಗೊಳಿಸಲು ಶಿಫಾರಸ್ಸು ಮಾಡಿದೆ.
ಲಾಭದಾಯಕ ಹುದ್ದೆ ವಿವಾದ ನಡೆದು ಬಂದ ಹಾದಿ...
1. 2015 ಮಾರ್ಚ್13: ಆಪ್‌ನ 21 ಶಾಸಕರನ್ನು ಸಂಸದೀಯ ಕಾರ‍್ಯದರ್ಶಿಗಳಾಗಿ ನೇಮಿಸಿದ ದೆಹಲಿ ಸರಕಾರ.
2. 2015 ಜೂನ್19: ಈ ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದು, ಅನರ್ಹಗೊಳಿಸುವಂತೆ ಕೋರಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದ ವಕೀಲ ಪ್ರಶಾಂತ್ ಪಟೇಲ್.
3. 2015 ಜೂನ್ 24: ಅನರ್ಹತೆ ಅಸ್ತ್ರದಿಂದ ಬಚಾವಾಗಲು ತಿದ್ದುಪಡಿ ವಿಧೇಯಕವೊಂದನ್ನು ಅಂಗೀಕರಿಸಿದ ದೆಹಲಿ ವಿಧಾನಸಭೆ.
4. 2016 ಜೂನ್ 16: ಈ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಲು ಅಂದಿನ ರಾಷ್ಟ್ರಪತಿ ಮುಖರ್ಜಿ ನಿರಾಕರಣೆ .
5. 2016 ಜೂನ್ 14ರಿಂದ 21: ಲಾಭದಾಯಕ ಹುದ್ದೆಗೆ ಸಂಬಂಧಿಸಿದಂತೆ 21 ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ ಚುನಾವಣೆ ಆಯೋಗ.
6. 2016 ಸೆಪ್ಟೆಂಬರ್ 8: ಕೇಜ್ರಿವಾಲ್ ಸರ್ಕಾರದ ನೇಮಕ ಆದೇಶ ವಜಾಗೊಳಿಸಿದ ದೆಹಲಿ ಹೈಕೋರ್ಟ್. 21 ಶಾಸಕರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ.
7. 2017 ಜನವರಿ 6: ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ದಿಲ್ಲಿಯ ರಾಜೌರಿ ಗಾರ್ಡನ್ ಕ್ಷೇತ್ರದ ಶಾಸಕ ಜೆರ್ನೇಲ್ ಸಿಂಗ್ ರಾಜೀನಾಮೆ.
8. 2017 ಜನವರಿ 24: ಚುನಾವಣಾ ಆಯೋಗದಿಂದ ಪ್ರಕರಣ ಕೈಬಿಡುವಂತೆ 21 ಶಾಸಕರು ಮಾಡಿಕೊಂಡ ಮನವಿ ಅರ್ಜಿ ತಿರಸ್ಕೃತ.
9. 2017 ಅಕ್ಟೋಬರ್ 19: ಹುದ್ದೆ ಕುರಿತು ವಿವರಣೆ ನೀಡುವಂತೆ ಆಪ್ ಶಾಸಕರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ.
10. 2018 ಜನವರಿ 19: ಒಟ್ಟು 20 ಶಾಸಕರನ್ನು ಅನರ್ಹಗೊಳಿಸುವಂತೆ ರಾಷ್ಟಪತಿ ಕೋವಿಂದ್ ಅವರಿಗೆ ಚುನಾವಣಾ ಆಯೋಗ ಶಿಫಾರಸು.