ನವದೆಹಲಿ: ಪ್ರಸ್ತುತ ಆಯೋಗ ಶಿಫಾರಸ್ಸು ಮಾಡಿರುವ ದೆಹಲಿಯ 20 ವಿಧಾನಸಭಾ ಕ್ಷೇತ್ರಗಳಲ್ಲಿ ತತ್ ಕ್ಷಣ ಉಪ ಚುನಾವಣೆ ನಡೆದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ ಎನ್ನಲಾಗಿದೆ.
ಅತ್ತ 20 ಶಾಸಕರ ಅನರ್ಹತೆಗೆ ಶಿಫಾರಸ್ಸು ಮಾಡುವ ಮೂಲಕ ಕೇಂದ್ರ ಚುನಾವಣಾ ಆಯೋಗ ಆಪ್ ಗೆ ಶಾಕ್ ನೀಡಿದ ಬೆನ್ನಲ್ಲೇ ಇತ್ತ ಆರವಿಂದ್ ಕೇಜ್ರಿವಾಲ್ ತಂಡಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಚುನಾವಣಾ ಆಯೋಗದ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಇತ್ತ ಖಾಸಗಿ ಸುದ್ದಿವಾಹಿನಿ ಎಬಿಪಿ ನ್ಯೂಸ್ ಸಿ-ವೋಟರ್ ನೊಂದಿಗೆ ಕೈ ಜೋಡಿಸಿ ಸಂಭಾವ್ಯ ದೆಹಲಿ ಉಪ ಚುನಾವಣೆಯ ಕ್ಷಿಪ್ರ ಸಮೀಕ್ಷೆ ನಡೆಸಿದೆ. ಅದರಂತೆ ತತ್ ಕ್ಷಣ ದೆಹಲಿಯ 20 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದರೆ ಆಪ್ ಸರ್ಕಾರ ತನ್ನ 20 ಸ್ಥಾನಗಳ ಪೈಕಿ ಬರೊಬ್ಬರಿ 12 ಸ್ಥಾನಗಳನ್ನು ಕಳೆದುಕೊಂಡು ಕೇವಲ 8 ಸ್ಥಾನಗಳಲ್ಲಿ ಮಾತ್ರ ಜಯ ದಾಖಲಿಸುವ ಸಾಧ್ಯತೆ ಇದೆ ಹೇಳಲಾಗಿುದೆ.
ನಿನ್ನೆಯಷ್ಟೇ ಚುನಾವಣಾ ಆಯೋಗ ಲಾಭದಾಯಕ ಹುದ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ನ ಶಾಸಕರಾದ ನರೇಶ್ ಯಾದವ್, ಸೋಮ್‌ದತ್, ಪ್ರವೀಣ್ ಕುಮಾರ್, ಜರ್ನೇಲ್ ಸಿಂಗ್ (ಇದೇ ಹೆಸರಿನ ಇಬ್ಬರು), ನಿತಿನ್ ತ್ಯಾಗಿ, ಆದರ್ಶ ಶಾಸ್ತ್ರಿ, ಸಂಜೀವ್ ಝಾ, ಸುಖ್ವೀರ್ ಸಿಂಗ್, ಮದನ್ ಲಾಲ್, ಸರಿತಾ ಸಿಂಗ್, ಅಲ್ಕಾ ಲಾಂಬಾ, ರಾಜೇಶ್ ರಿಷಿ, ಅನಿಲ್ ಕುಮಾರ್ ಬಾಜಪೈ, ಮನೋಜ್ ಕುಮಾರ್, ಕೈಲಾಶ್ ಗೆಹ್ಲೋಟ್, ಅವತಾರ್ ಸಿಂಗ್, ವಿಜೇಂದ್ರ ಗಾರ್ಗ್ ವಿಜಯ್, ರಾಜೇಶ್ ಗುಪ್ತಾ, ಶರದ್ ಕುಮಾರ್, ಶಿವ ಚರಣ್ ಗೋಯಲ್ ಸೇರಿದಂತೆ ಒಟ್ಟು 20 ಶಾಸರಕ ಅನರ್ಹತೆಗೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದೆ.
ಒಂದೊಮ್ಮೆ ಆಪ್ ನ ಈ 20 ಶಾಸಕರು ಅನರ್ಹಗೊಂಡಲ್ಲಿ, ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಲ್ಲಿ ಕೇಜ್ರಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ. ಈ 20 ಸ್ಥಾನಗಳ ಪೈಕಿ ಆಪ್ 12 ಸೀಟು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಈ 12 ಸೀಟುಗಳಲ್ಲಿ ಬಿಜೆಪಿ 8 ಹಾಗೂ ಕಾಂಗ್ರೆಸ್ 4 ಪಾಲಾಗಲಿದೆ ಎಂದು ಎಂದು ಎಬಿಪಿ ನ್ಯೂಸ್ ಕ್ಷಿಪ್ರ ಸಮೀಕ್ಷೆ ಅಂದಾಜಿಸಿದೆ.