ನವದೆಹಲಿ: ವಿಶಿಷ್ಟ ಗುರುತಿನ ಚೀಟಿ ಆಧಾರ್ ನಲ್ಲಿನ ಮಾಹಿತಿ ಸೋರಿಕೆಗೆ ಸತತ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ ಯುಐಡಿಎಐ ಮುಖ್ಯಸ್ಥ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
ಆಧಾರ್ ಮಾಹಿತಿ ಸೋರಿಕೆ ಸಂಬಂಧ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಚರ್ಚೆಗಳ ಹಿನ್ನಲೆಯಲ್ಲಿ ಮಾತನಾಡಿದ ಪಾಂಡೆ, ಆಧಾರ್ ಮಾಹಿತಿಗಳು ಸಂಪೂರ್ಣ ಸುರಕ್ಷತಿವಾಗಿದ್ದು, ಜನರು ಹೆದರುವ ಅಗತ್ಯವಿಲ್ಲ. ಆಧಾರ್ ದತ್ತಾಂಶ ಸಂಗ್ರಹಣೆ ಹಲವು ವಿವಿಧ ಸ್ಥರಗಳ ಭದ್ರತೆ ಹೊಂದಿದ್ದು, ಅವುಗಳ ಸೋರಿಕೆ ಅಸಾಧ್ಯ ಎಂದು ಹೇಳಿದ್ದಾರೆ. ಅಂತೆಯೇ ಯಾವುದೇ ರೀತಿಯ ಕಂಪ್ಯೂಟರ್ ತಜ್ಞರೂ ಕೂಡ ಆಧಾರ್ ಭದ್ರತೆಯನ್ನು ಭೇದಿಸಿ ಮಾಹಿತಿ ಪಡೆಯಲು ಸಾಧ್ಯವಿಲ್ಲ ಎಂದು ಅವರು ವಿಶ್ವಾಸದಿಂದ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೇವಲ 500 ರು.ಗಳಿಗೆ ಆಧಾರ್ ಮಾಹಿತಿ ಮಾರಾಟಕ್ಕಿದೆ ಎಂದು ದಿ ಟ್ರಿಬ್ಯೂನ್ ಪತ್ರಿಕೆಯ ವರದಿಗಾರ್ತಿ ರಚನಾ ಖೈರಾ ಅವರು ವರದಿ ಮಾಡಿದ್ದರು. ಅಲ್ಲದೆ ದೇಶದ 119 ಕೋಟಿ ಭಾರತೀಯರ ಆಧಾರ್ ಮಾಹಿತಿ ಕಳವಿನ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಈ ಸುದ್ದಿ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿ, ಎಚ್ಚೆತ್ತುಕೊಂಡಿದ್ದ ಆಧಾರ್ ಸಂಸ್ಥೆ ವರದಿಗಾರ್ತಿ ವಿರುದ್ಧ ಎಫ್ ಐಆರ್ ಕೂಡ ದಾಖಲು ಮಾಡಿತ್ತು. ಇದರ ಬೆನ್ನಲ್ಲೇ ಆಧಾರ್ ಸಂಸ್ಥಾಪಕ ನಂದನ್ ನಿಲೇಕಣೆ ಅವರು ಮಾತನಾಡಿ, ಆಧಾರ್ ವ್ಯವಸ್ಥೆ ಅತ್ಯಂತ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.