ನವದೆಹಲಿ: ಲಾಭದಾಯಕ ಹುದ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಮುಖಭಂಗ ಅನುಭವಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಂತಿಮವಾಗಿ ಸತ್ಯಕ್ಕೆ ಜಯ ಸಂದಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್, ನೀವು ಸತ್ಯ ಮತ್ತು ಪ್ರಾಮಾಣಿಕ ನಡೆವಾಗ ಯಾವಾಗಲು ಅಡ್ಡಿ-ಆತಂಕಗಳು ಎದುರಾಗುತ್ತವೆ.. ಅದು ಸಾಮಾನ್ಯ.. ಆದರೆ ಅಷ್ಟಕ್ಕೇ ಹೆದರಿ ನಮ್ಮ ಪ್ರಾಮಾಣಿಕತೆಯನ್ನು ಕೈಬಿಡಬಾರದು. ನಿಮ್ಮಲ್ಲಿ ಸತ್ಯವಿದ್ದಾಗ ಪ್ರಪಂಚದ ಎಲ್ಲ ಅದೃಶ್ಯ ಶಕ್ತಿಗಳು ನಿಮಗೆ ಸಹಾಯ ಮಾಡುತ್ತವೆ. ದೇವರು ಕೂಡ ನಿಮಗೆ ಸಾಥ್ ನೀಡುತ್ತಾನೆ. ನೀವು ದೇಶ ಮತ್ತು ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದು, ಅಂತಿಮವಾಗಿ ಗೆಲುವು ನಿಮ್ಮದೇ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಆಯೋಗದ ವಿರುದ್ಧ ಆಪ್ ಕೆಂಡಾಮಂಡಲ
ಇತ್ತ ಲಾಭದಾಯಕ ಹುದ್ದೆ ಹೊಂದಿದ ಆರೋಪದಡಿ 20 ಶಾಸಕರನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ದಿಲ್ಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ , ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದೆ. ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಶಿಫಾರಸು ಮಾಡಿರುವುದರ ಹಿಂದೆ ಭಾರಿ ಸಂಚು ಅಡಗಿದೆ ಎಂದು ಶುಕ್ರವಾರದ ಬೆಳವಣಿಗೆಗಳಿಂದ ಹತಾಶೆಗೊಂಡ ಆಪ್ ಮುಖಂಡರು ಹೇಳಿದ್ದಾರೆ. ಅಲ್ಲದೆ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಆಪ್ ಜರಿದಿದ್ದು, ಚುನಾವಣಾ ಆಯೋಗ ಕೇಂದ್ರದ ಆಣತಿಯಂತೆ ವರ್ತಿಸುತ್ತಿದೆ. ಪ್ರಧಾನಿ ಕಾರ್ಯಾಲಯದ ಅಂಚೆ ಪೆಟ್ಟಿಗೆಯಂತಾಗಿದೆ ಎಂದು ಆಪ್ ಕೆಂಡಕಾರಿದೆ.
ಇನ್ನು ಶಾಸಕರ ಅನರ್ಹತೆ ಶಿಫಾರಸು ಪ್ರಶ್ನಿಸಿ ಆಪ್ ದಿಲ್ಲಿ ಹೈಕೋರ್ಟ್ ಮೊರೆ ಹೋಗಿತ್ತಾದರೂ, ಅದಕ್ಕೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.