ನವದೆಹಲಿ: ಲಾಭದಾಯಕ ಹುದ್ದೆ ಪ್ರಕರಣಕ್ಕೆ ಸಂಬಂಧಿಸಿದಂತ ತನ್ನ 20 ಶಾಸಕರ ಅನರ್ಹತೆ ಭೀತಿ ಎದುರಿಸುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ದೀದೀ, ಇದೊಂದು ಕೇಂದ್ರ ಸರ್ಕಾರದ ಷಡ್ಯಂತ್ರ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಕೇಂದ್ರ ಸರಕಾರ ರಾಜಕೀಯ ಹಗೆತನಕ್ಕೆ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದು, ಇದಕ್ಕೆ ದೆಹಲಿಯ ಆಪ್ ಶಾಸಕರ ಅನರ್ಹತೆ ಶಿಫಾರಸು ಒಂದು ತಾಜಾ ನಿದರ್ಶನ. ಈ ವಿಚಾರದಲ್ಲಿ ಕೇಜ್ರಿವಾಲ್ ಮತ್ತವರ ಪಕ್ಷದ ಶಾಸಕರ ಪರ ನಾನು ನಿಲ್ಲುತ್ತೇನೆ. ಕೇಂದ್ರದ ಎನ್ ಡಿಎ ಸರ್ಕಾರ ತತ್ವಾದರ್ಶಗಳನ್ನು ಮೂಲೆಗುಂಪು ಮಾಡಿ ಸಾಮಾನ್ಯ ನ್ಯಾಯಕ್ಕೆ ಧಕ್ಕೆಯುಂಟು ಮಾಡುತ್ತಿದೆ. ಮೋದಿ ಸರ್ಕಾರದ ದುರಾಡಳಿತದ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಆಪ್ ಪ್ರಧಾನ ವಕ್ತಾರ ಸೌರಭ್ ಭಾರದ್ವಾಜ್ ಅವರು, ನಮ್ಮ ಪಕ್ಷದ 20 ಶಾಸಕರ ಅನರ್ಹತೆಗೆ ಶಿಫಾರಸು ಮಾಡುವ ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜ್ಯೋತಿ ಅವರು ನಿವೃತ್ತಿಗೂ ಮುನ್ನ ಪ್ರಧಾನಿ ಮೋದಿಯವರಿಗೆ 'ಋುಣಭಾರ' ತೀರಿಸಿದ್ದಾರೆ. ಆಯೋಗ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯಬಾರದು ಎಂದು ಹೇಳಿದ್ದಾರೆ.
ವಿಪಕ್ಷಗಳಿಂದ ದೆಹಲಿ ಸಿಎಂ ಕೇಜ್ರಿವಾಲ್ ರಾಜೀನಾಮೆಗೆ ಪಟ್ಟು
ಅತ್ತ ಚುನಾವಣಾ ಆಯೋಗ ಆಪ್ ನ 20 ಶಾಸಕರನ್ನು ಅನರ್ಹಗೊಳಿಸುವ ಕುರಿತು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡುತ್ತಿದ್ದಂತೆಯೇ ಇತ್ತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ರಾಜಿನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು, ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಂಬುದಕ್ಕೆ ಚುನಾವಣಾ ಆಯೋಗದ ಈ ನಿರ್ಧಾರ ತೋರಿಸಿಕೊಟ್ಟಿದೆ. ಅಧಿಕಾರದಲ್ಲಿ ಮುಂದುವರಿಯುವ ಯಾವ ಹಕ್ಕೂ ಅವರಿಗಿಲ್ಲ ಎಂದು ಹೇಳಿದ್ದಾರೆ.