ದೇಶ

ಸ್ಮಾರ್ಟ್ ಸಿಟಿ ಪಟ್ಟಿಗೆ ಮತ್ತೆ 9 ಹೊಸ ನಗರಗಳ ಸೇರ್ಪಡೆ

Srinivasamurthy VN
ನವದೆಹಲಿ: ಕೇಂದ್ರ ಸರ್ಕಾರದ ಬಹು ಉದ್ದೇಶಿತ ಯೋಜನೆ ಸ್ಮಾರ್ಟ್ ಸಿಟಿ ಪಟ್ಟಿಗೆ ಮತ್ತೆ ಒಂಭತ್ತು ನಗರಗಳನ್ನು ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸ್ಮಾರ್ಟ್ ಸಿಟಿಗಳ ಸಂಖ್ಯೆ ಇದೀಗ 99ಕ್ಕೆ ಏರಿದಂತಾಗಿದೆ.
ಈ ಬಗ್ಗೆ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಘೋಷಣೆ ಮಾಡಿದ್ದು, ಉತ್ತರ ಪ್ರದೇಶದ ಮೂರು ನಗರಗಳು ಸೇರಿದಂತೆ ಮತ್ತೆ 9 ನಗರಗಳನ್ನು 'ಸ್ಮಾರ್ಟ್‌ ಸಿಟಿ' ಬಳಗಕ್ಕೆ ಸೇರಿಸಲಾಗಿದೆ ಎಂದು  ಹೇಳಿದ್ದಾರೆ. ಸಿಲ್ವೇಸ್ಸಾ, ಈರೋಡ್‌, ಡಿಯು, ಬಿಹಾರ್‌ಶರೀಫ್‌, ಬರೇಲಿ, ಇಟಾನಗರ್‌, ಮೊರಾದಾಬಾದ್‌, ಸಹರಣ್‌ಪುರ ಮತ್ತು ಕಾವರಟ್ಟಿಯನ್ನು ಸೇರಿಸಲಾಗಿದೆ. ಈ 9 ನಗರಗಳನ್ನು ಸ್ಮಾರ್ಟ್‌ ಸಿಟಿಗಳಾಗಿ ಪರಿವರ್ತಿಸುವ  ಹಾದಿಯಲ್ಲಿ 409 ಯೋಜನೆಗಳಲ್ಲಿ ಹೂಡುವುದಕ್ಕಾಗಿ ಒಟ್ಟು 12,824 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರಿ ಮೂಲಗಳ ಪ್ರಕಾರ ಪ್ರಸ್ತುತ ಇರುವ 90 ನಗರಗಳ ಸ್ಮಾರ್ಟ್ ಸಿಟಿ ಪಟ್ಟಿಗೆ ಇದೀಗ ಬಿಹಾರ, ತಮಿಳುನಾಡು, ಡಿಯು ಮತ್ತು ಡಾಮನ್‌, ಅರುಣಾಚಲ ಪ್ರದೇಶ, ಲಕ್ಷದ್ವೀಪದಿಂದ ತಲಾ ಒಂದು ಹಾಗೂ ಉತ್ತರ  ಪ್ರದೇಶದ ಮೂರು ನಗರಗಳನ್ನು 'ಸ್ಮಾರ್ಟ್‌ ಸಿಟಿ' ವ್ಯಾಪ್ತಿಗೆ ಸೇರಿಸಲಾಗಿದೆ. ವಸತಿ ಮತ್ತು ನಗರಾಬಿವೃದ್ಧಿ ಸಚಿವಾಲಯ ಇಲ್ಲಿಯ ತನಕ 90 ನಗರಗಳ ಹೆಸರುಗಳನ್ನು 'ಸ್ಮಾರ್ಟ್‌ ಸಿಟಿ' ವ್ಯಾಪ್ತಿಗೆ ಸೇರಿಸಿದೆ. ಕೇಂದ್ರ ಸರಕಾರದ ಈ  ಮಹತ್ವಾಕಾಂಕ್ಷೆ ಯೋಜನೆಯಡಿ ಪ್ರತೀ ನಗರ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ತಲಾ 500 ಕೋಟಿ ರೂಪಾಯಿ (ಕೇಂದ್ರ ಸರ್ಕಾರದ ಸಹಾಯಧನ) ಗಿಟ್ಟಿಸಲಿದೆ.
SCROLL FOR NEXT