ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ತೀವ್ರ ಕದನ ವಿರಾಮ ಉಲ್ಲಂಘನೆ ಸಮಸ್ಯೆ ಉಭಯ ದೇಶಗಳ ನಡುವಿನ ಮಾತುಕತೆಯಿಂದ ಮಾತ್ರ ಪರಿಹಾರವಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಪಾಕಿಸ್ತಾನಿ ಪಡೆಗಳು ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪರಿಣಾಮ ಈಗಾಗಲೇ ಕಣಿವೆ ರಾಜ್ಯದಲ್ಲಿ ಐದು ಮಂದಿ ಸಾರ್ವಜನಿಕರು, ಇಬ್ಬರು ಯೋಧರು ಮೃತರಾಗಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಗಡಿಯಲ್ಲಿನ ಹಲವು ಗ್ರಾಮಗಳಲ್ಲಿ ಗ್ರಾಮಸ್ಥರು ಮನೆಗಳನ್ನು ತೊರೆದು ಹೋಗುತ್ತಿದ್ದಾರೆ. ಹೀಗಾಗಿ ಕೂಡಲೇ ಸಮಸ್ಯೆ ಇತ್ಯರ್ಥಕ್ಕೆ ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ಮಾತನಾಡಬೇಕು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದೊಂದಿಗೆ ಪರಸ್ಪರ ಮಾತುಕತೆಯಿಂದ ಮಾತ್ರ ಪ್ರಸ್ತುತ ಉಲ್ಪಣವಾಗಿರುವ ಸಮಸ್ಯೆ ಇತ್ಯರ್ಥವಾಗಲಿದೆ. ಭಾರತದ ಭದ್ರತಾ ಸಲಹೆಗಾರರಾದ ಅಜಿತ್ ಧೋವಲ್ ಅವರು ಈ ಕೂಡಲೇ ಪಾಕಿಸ್ತಾನದ ಭದ್ರತಾ ಸಲಹೆಗಾರರೊಂದಿಗೆ ಚರ್ಚೆ ನಡೆಸಲೇಬೇಕಿದೆ. ಆಗ ಮಾತ್ರ ಕಣಿವೆ ರಾಜ್ಯದ ಗಡಿ ಗ್ರಾಮಗಳಲ್ಲಾಗುತ್ತಿರುವ ಭಾರಿ ಪ್ರಮಾಣದ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಿಲ್ಲಲಿದೆ. ಉಭಯ ದೇಶಗಳ ನಡುವೆ ಯಾವುದೇ ವಿಚಾರದಲ್ಲೂ ಭಿನ್ನಾಭಿಪ್ರಾಯವಿದ್ದರೂ, ಭಾರತ ಸರ್ಕಾರ ಗಡಿ ಗ್ರಾಮಗಳಲ್ಲಿನ ಶಾಂತಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಅಂತೆಯೇ ಬ್ಯಾಂಕಾಕ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳ ಭದ್ರತಾ ಸಲಹೆಗಾರರು ರಹಸ್ಯ ಮಾತುಕತೆ ನಡೆಸಿದ್ದರೆ, ಈಗೇಕೆ ಸತತ ಕದನವಿರಾಮ ಉಲ್ಲಂಘನೆಯಾಗುತ್ತದೆ ಎಂದು ಪ್ರಶ್ನಿಸಿದರು. ಕನಿಷ್ಠ ಪಕ್ಷ ಅಂತಾರಾಷ್ಟ್ರೀಯ ಗಡಿಯಲ್ಲಿ ನಾವು ಕದನ ವಿರಾಮವನ್ನು ನಿರ್ವಹಣೆ ಮಾಡದೇ ಇದ್ದರೆ ಅಲ್ಲಿನ ಜನರಿಗೆ ನಾವು ಏನು ನೀಡಲು ಸಾಧ್ಯ ಎಂದು ಒಮರ್ ಪ್ರಶ್ನಿಸಿದ್ದಾರೆ. ಭಾರತ ಸರ್ಕಾರ ಆಸಕ್ತಿವಹಿಸಿದರೆ ಇದೊಂದು ಸಮಸ್ಯೆಯೇ ಅಲ್ಲ.. ಆದರೂ ಕೇಂದ್ರ ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಕೇಂದ್ರ ಸರ್ಕಾರದ ಹಠಮಾರಿತನದಿಂದ ಗಡಿ ಭಾಗದ ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.