ಕಾಂಗ್ರೆಸ್ ಮುಖಂಡ ಅಜಯ್ ಮಕೇನ್
ನವದೆಹಲಿ: ಲಾಭದಾಯಕ ಹುದ್ದೆ ವಿಚಾರಕ್ಕೆ ಸಂಬಂಧಿಸಿದಂತೆ 20 ಆಮ್ ಆದ್ಮಿ ಪಕ್ಷದ ಅನರ್ಹತೆಯನ್ನು ಬಿಜೆಪಿ ಮತ್ತು ಕೇಂದ್ರ ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡಿತು ಎಂದು ಕಾಂಗ್ರೆಸ್ ಆರೋಪಿಸಿದೆ.
ಅತ್ತ 20 ಆಪ್ ಶಾಸಕರ ಅನರ್ಹಗೊಳಿಸುವ ಚುನಾವಣಾ ಆಯೋಗದ ವರದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿಯೇ ಶಾಸಕರ ಅನರ್ಹತೆಯನ್ನು ವಿಳಂಬ ಮಾಡಿತು ಎಂದು ಆರೋಪಿಸಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ಮುಖಂಡ ಅಜಯ್ ಮಕೇನ್ ಅವರು, ರಾಜ್ಯಸಭೆ ಚುನಾವಣೆಗಾಗಿ ಆಪ್ ಶಾಸಕರ ಅನರ್ಹತೆಯನ್ನು ಬಿಜೆಪಿ ಸರ್ಕಾರ 3 ವಾರಗಳ ಮುಂದೂಡಿತು ಎಂದು ಹೇಳಿದ್ದಾರೆ.
"ಆಪ್ ಶಾಸಕರ ಅನರ್ಹತೆ ನಿರ್ಧಾರ ಡಿಸೆಂಬರ್ 22ಕ್ಕೂ ಮೊದಲೇ ಬಂದಿದ್ದರೆ, ಆಗ ಆಪ್ ನ 20 ಶಾಸಕರು ರಾಜ್ಯಸಭೆಯಲ್ಲಿ ಮತದಾನ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದರು. ಬಿಜೆಪಿ ತನ್ನ ಲಾಭಕ್ಕಾಗಿ ಆಪ್ ಶಾಸಕರ ಅನರ್ಹತೆ ಬಿಕ್ಕಟ್ಟನ್ನು ಬಳಿಸಿಕೊಂಡಿದೆ ಎಂದು ಮಕೇನ್ ಆರೋಪಿಸಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಚುನಾವಣಾ ಆಯೋಗ ಲಾಭದಾಯಕ ಹುದ್ದೆ ಹೊಂದಿದ ಆರೋಪ ಹೊತ್ತಿದ್ದ 20 ಆಮ್ ಆದ್ಮಿ ಪಕ್ಷದ ಶಾಸಕರನ್ನು ಅಮಾನತುಗೊಳಿಸಲು ರಾಷ್ಟ್ರಪತಿಗೆ ಶಿಫಾರಸ್ಸು ಮಾಡಿದ್ದರು. ಅದರಂತೆ ಇಂದು ರಾಷ್ಟ್ರಪತಿ ಕೋವಿಂದ್ ಅವರು, ಚುನಾವಣಾ ಆಯೋಗದ ಶಿಫಾರಸ್ಸಿಗೆ ಅಂಕಿತ ಹಾಕಿದ್ದಾರೆ.