ಬರೇಲಿ: ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಅತ್ತ ಉತ್ತರ ಪ್ರದೇಶದಲ್ಲಿ ಭಾರತೀಯ ಸೇನೆಯ ನಕಾಶೆಗಳು ಜೆರಾಕ್ಸ್ ಅಂಗಡಿಗಳಲ್ಲಿ ಪತ್ತೆಯಾಗುವ ಮೂಲಕ ಆತಂಕ ಮೂಡಿಸಿದೆ.
ಪ್ರತೀ ಬಾರಿಯಂತೆಯೇ ಈ ಬಾರಿಯ ಭಾರತದ ಗಣರಾಜ್ಯೋತ್ಸವ ದಿನಾಚರಣೆಗೆ ಉಗ್ರ ದಾಳಿ ಭೀತಿ ಇದ್ದು, ಅಸಿಯಾನ್ ವಿಶ್ವ ನಾಯಕರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿರುವುದರಿಂದ ಈ ಬಾರಿ ಗಣರಾಜ್ಯೋತ್ಸವಕ್ಕೆ ವ್ಯಾಪಕ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ. ಅದರಂತೆ ಈಗಾಗಲೇ ಸಿದ್ಧತೆ ಆರಂಭವಾಗಿದೆಯಾದರು, ಗಣರಾಜ್ಯೋತ್ಸವ ದಿನದಂದು ದೇಶದಲ್ಲಿ ಭಯದ ವಾತಾರವರಣ ನಿರ್ಮಾಣ ಮಾಡಲು ಉಗ್ರರು ಹವಣಿಸುತ್ತಿದ್ದಾರೆ.
ಈ ಆತಂಕದ ಬೆನ್ನಲ್ಲೇ ಅತ್ತ ಉತ್ತರ ಪ್ರದೇಶದ ಜೆರಾಕ್ಸ್ ಅಂಗಡಿಗಳಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದ ನಕಾಶೆಗಳು ಪತ್ತೆಯಾಗುವ ಮೂಲಕ ಆತಂಕ ಮೂಡಿಸಿದೆ. ಬರೇಲಿಯ ಜೆರಾಕ್ಸ್ ಅಂಗಡಿಯೊಂದರಲ್ಲಿ ಸೇನೆಗೆ ಸಂಬಂಧಿಸಿದ ನಕಾಶೆಗಳು ಶನಿವಾರ ಪತ್ತೆಯಾಗಿದ್ದು, ಗುರುತು ತಿಳಿಯದ ಇಬ್ಬರು ಯುವಕರು ಈ ನಕಾಶೆಗಳನ್ನು ಜೆರಾಕ್ಸ್ ಮಾಡಿಸಲು ತಂದಿದ್ದರಂತೆ. ಪ್ರಸ್ತುತ ಈ ವಿಚಾರ ಸ್ಥಳೀಯ ಪೊಲೀಸರಿಗೆ ಹಾಗೂ ಸೇನೆಯ ಗುಪ್ತಚರ ಅಧಿಕಾರಿಗಳಿಗೆ ತಿಳಿದಿದ್ದು, ಅಂಗಡಿಯ ಮಾಲೀಕನನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಇನ್ನು ಮಾಲೀಕ ಹೇಳಿರುವಂತೆ ಇಬ್ಬರು ಯುವಕರು ಈ ನಕಾಶೆಗಳನ್ನು ತಂದಿದ್ದು, ನಂತರ ಅವುಗಳನ್ನು ಮತ್ತು ಜೆರಾಕ್ಸ್ ಪ್ರತಿಗಳನ್ನು ಪಡೆಯುವುದಾಗಿ ತಿಳಿಸಿದ್ದರು. ಅಷ್ಟರಲ್ಲಾಗಲೇ ಪೊಲೀಸರು ದಾಳಿ ಮಾಡಿದರು ಎಂದು ಹೇಳಿದ್ಜಾನೆ. ಪ್ರಸ್ತುತ ಅಂಗಡಿ ಮೇಲೆ ದಾಳಿ ಮಾಡಿರುವ ಪೊಲೀಸರು ನಕಾಶೆಗಳನ್ನು ವಶಕ್ಕೆ ಪಡೆದಿದ್ದು, ಅಂಗಡಿಯ ಮಾಲಿಕ ಕೃಷ್ಣ ಅಗರವಾಲ್ ನನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದು, ಈ ವಿಷಯವು ಸೇನೆಗೆ ಸಂಬಂಧಿಸಿದ ವಿಚಾರವಾದ್ದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಬರೇಲಿಯ ಎಸ್‌ಎಸ್‌ಪಿ ಜೋಗೇಂದ್ರ ಕುಮಾರ ಅವರು ಸುದ್ದಿಗಾರರಿಗೆ ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos