ನವದೆಹಲಿ: ಶಾಸಕರನ್ನು ಅನರ್ಹಗೊಳಿಸುವ ರಾಷ್ಟ್ರಪತಿಗಳ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾರಕ ಆಮ್ ಆದ್ಮಿ ಪಕ್ಷ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ಅತ್ತ ಲಾಭದಾಯಕ ಹುದ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 20 ಆಪ್ ಶಾಸಕರ ಅನರ್ಹಗೊಳಿಸುವ ಚುನಾವಣಾ ಆಯೋಗದ ಶಿಫಾರಸ್ಸಿಗೆ ಅಂಕಿತ ಹಾಕಿದ್ದು, ಇದೀಗ ಆಮ್ ಆದ್ಮಿ ಪಕ್ಷದ 20 ಶಾಸಕರು ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಆಮ್ ಆದ್ಮಿ ಪಕ್ಷ, ರಾಷ್ಟ್ರಪತಿಗಳ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಪ್ ವಕ್ತಾರ ಮತ್ತು ಅನರ್ಹಗೊಂಡ ಶಾಸಕರಲ್ಲಿ ಓರ್ವರಾಗಿರುವ ಮದನ್ ಲಾಲ್ ಅವರು, ರಾಷ್ಟ್ರಪತಿಗಳ ಮೇಲೆ ಒಂದಷ್ಟು ಭರವಸೆ ಇತ್ತು. ಆದರೀಗ ಅದೂ ಕಮರಿ ಹೋಗಿದ್ದು, ರಾಷ್ಟ್ರಪತಿಗಳ ನಿರ್ಧಾರ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ. ನಮ್ಮ ವಾದವನ್ನು ಆಲಿಸದೇ ರಾಷ್ಟ್ರಪತಿಗಳು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ ಅಂತಿಮವಾಗಿ ನ್ಯಾಯಾಂಗದ ಮೇಲೆ ನಮ್ಮ ಭರವಸೆ ಇದ್ದು, ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ. ನಾಳೆಯಿಂದ ನಮ್ಮ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಮತ್ತೋರ್ವ ಶಾಸಕರಾದ ಅಲ್ಕಾಲಾಂಬ ಹೇಳಿದ್ದಾರೆ.