ದೆಹಲಿ: ದಾವೋಸ್ ನಲ್ಲಿ ನಾಳೆಯಿಂದ ವಿಶ್ವ ಆರ್ಥಿಕ ಒಕ್ಕೂಟದ 48 ನೇ ವಾರ್ಷಿಕ ಸಭೆ ಆರಂಭವಾಗಲಿದೆ. ಐದು ದಿನಗಳ ಶೃಂಗಸಭೆಯಲ್ಲಿ ವಿವಿಧ ರಾಷ್ಟ್ರಗಳ ರಾಜಕಾರಣಿಗಳು, ಉದ್ಯಮಿಗಳು, ಕಲಾವಿದರು, ಅಕಾಡೆಮಿ, ಮತ್ತು ನಾಗರಿಕ ಸಂಘಟನೆಗಳು ಸೇರಿದಂತೆ ಸುಮಾರು 3 ಸಾವಿರ ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಯೊಂದಿಗೆ ಆರು ಮಂದಿ ಸಚಿವರು, ಮುಖೇಶ್ ಅಂಬಾನಿ ಮತ್ತಿತರ ವಿವಿಧ ಕಂಪನಿಗಳು ಸಿಇಓಗಳು ಸೇರಿದಂತೆ ಭಾರತದಿಂದ 130 ಮಂದಿ ಪ್ರತಿನಿಧಿಸುತ್ತಿದ್ದಾರೆ.
ವಿಶ್ವ ಆರ್ಥಿಕ ಒಕ್ಕೂಟದ ಅಧ್ಯಕ್ಷ ಕ್ಲಾಸ್ ಸ್ಕ್ವಾಬ್ , ನಾಳೆ ಸಂಜೆ ಶೃಂಗಸಭೆ ಉದ್ಘಾಟಿಸಲಿದ್ದು, ಸಭೆಯ ಮಹತ್ವ ವಿವರಿಸಲಿದ್ದಾರೆ. ಬಾಲಿವುಡ್ ಸುಪರ್ ಸ್ಟಾರ್ ಶಾರೂಖ್ ಖಾನ್ , ಆಸ್ಟ್ರೇಲಿಯನ್ ನಟಿ ಕ್ಯಾಟ್ ಬ್ಲಾಂಚೆಟ್, ಸಂಗೀತ ಮಾತ್ರಿಕ, ಎಲ್ಟನ್ ಜಾನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಗೈದಿರುವ ಸಾಧಕರನ್ನು ಸನ್ಮಾನಿಸಲಾಗುತ್ತಿದೆ.
20 ವರ್ಷಗಳ ನಂತರ ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರಮೋದಿ ದಾವೋಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ 1997 ರಲ್ಲಿ ಮಾಜಿ ಪ್ರಧಾನಿ ಹೆಚ್, ಡಿ. ದೇವೇಗೌಡರು ಪಾಲ್ಗೊಂಡಿದ್ದರು.
ಮಂಗಳವಾರ ಪ್ರಧಾನಿ ನರೇಂದ್ರಮೋದಿ ಭಾರತದಲ್ಲಿನ ಮುಕ್ತ ಆರ್ಥಿಕತೆ ಕುರಿತಂತೆ ಶೃಂಗಸಭೆಯಲ್ಲಿ ಮಾತನಾಡಲಿದ್ದಾರೆ. ಅಂದು ಸಂಜೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿರುವ ಭಾರತೀಯ ಕಂಪನಿಗಳ 20 ಕಂಪನಿಗಳ ಸಿಇಒಗಳೊಂದಿಗೆ ಏರ್ಪಡಿಸಿರುವ ಔತಣಕೂಟದಲ್ಲಿ ಮೋದಿ ಪಾಲ್ಗೊಳ್ಳಲಿದ್ದು, ವಿಶ್ವ ಆರ್ಥಿಕ ಒಕ್ಕೂಟದ ಅಂತಾರಾಷ್ಟ್ರೀಯ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಸ್ವಿಸ್ ಅಧ್ಯಕ್ಷ ಅಲೈನ್ ಬರ್ಸೆಟ್ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತಂತೆ ನರೇಂದ್ರಮೋದಿ ಸಮಾಲೋಚನೆ ನಡೆಸಲಿದ್ದಾರೆ. ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಮಾರೋಪ ಸಮಾರಂಭದ ಭಾಷಣ ಮಾಡಲಿದ್ದಾರೆ. ಪಾಕಿಸ್ತಾನ ಪ್ರಧಾನಮಂತ್ರಿ ಸಹೀದ್ ಕಾಕ್ವನ್ ಅಬ್ಬಾಸಿ ಕೂಡಾ ದಾವೋಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿ ಹಾಗೂ ಅಬ್ಬಾಸಿ ನಡುವೆ ಯಾವುದೇ ಮಾತುಕತೆ ನಡೆಯುವುದಿಲ್ಲ.
ಜರ್ಮನಿ ಛಾನ್ಸಲರ್ ಏಂಜೆಲಾ ಮಾರ್ಕೆಲ್ ಸೇರಿದಂತೆ ಹಲವು ರಾಷ್ಟ್ರಗಳ ಗಣ್ಯರು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದು, ಅಮೆರಿಕಾದ ಅಧ್ಯಕ್ಷರ ಭಾಷಣದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ರಾಜಕೀಯ, ಆರ್ಥಿಕ, ಪರಿಸರ , ಭಯೋತ್ಪಾದನೆ ನಿಯಂತ್ರಣ ಮತ್ತಿತರ ವಿಚಾರ ಕುರಿತಂತೆಯೂ ಚರ್ಚೆ ನಡೆಯಲಿದೆ.
ಶೃಂಗಸಭೆಯ ಮೊದಲ ಅಧಿವೇಶನದಲ್ಲಿ ಯೋಗ ತರಬೇತಿ ನೀಡಲಾಗುತ್ತಿದ್ದು, ಭಾರತ, ಸಂಸ್ಕೃತಿ , ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸಲಾಗುತ್ತಿದೆ.ಸುಸ್ಥಿರ ಅಭಿವೃದ್ಧಿ, ಕಪ್ಪು ಹಣ ಸೇರಿದಂತೆ ಹಲವು ವಿಚಾರ ಕುರಿತಂತೆ ಪ್ರಧಾನಿ ನರೇಂದ್ರಮೋದಿ ಶೃಂಗಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ.