ಪಾಕ್ ಶೆಲ್ ದಾಳಿಗೆ ಹಾನಿಗೀಡಾಗಿರುವ ಮನೆ
ಶ್ರೀನಗರ: ಪದೇ ಪದೇ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಸೋಮವಾರವೂ ಸಹ ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ರಜೌರಿ ಜಿಲ್ಲೆಗಳಲ್ಲಿರುವ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಗುಂಡು ಮತ್ತು ಶೆಲ್ ದಾಳಿ ನಡೆಸಿವೆ.
ಸತತ ನಾಲ್ಕನೇ ದಿನವೂ ಪಾಕಿಸ್ತಾನ ಸೇನೆ ಶೆಲ್ ದಾಳಿ ನಡೆಸಿದ್ದು, ಶೆಲ್ ದಾಳಿಯಿಂದಾಗಿ ಭಾರತದ ಗಡಿಯಲ್ಲಿರುವ ಗ್ರಾಮಗಳ ನೂರಾರು ಮನೆಗಳಿಗೆ ಹಾನಿಯಾಗಿದೆ. ಗಡಿಯಲ್ಲಿ ಇದೀಗ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ವರೆಗೂ ಸುಮಾರು 10 ಸಾವಿರಕ್ಕೂ ಅಧಿಕ ಗಡಿ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲಾಗಿದೆ. ಅಂತೆಯೇ ಕಳೆದ ಗುರುವಾರದಿಂದ ಆರಂಭವಾಗ ಕದನ ವಿರಾಮ ಉಲ್ಲಂಘನೆ ಇಂದೂ ಮುಂದುವರೆದಿದ್ದು, ಪಾಕ್ ಸೈನಿಕರ ಗುಂಡಿನ ದಾಳಿಯಲ್ಲಿ ಈ ವರೆಗೂ ಯೋಧರೂ ಸೇರಿದಂತೆ 12 ಮಂದಿ ಸಾವಿಗೀಡಾಗಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ನಾಗರೀಕರ ಮೇಲೆ ದಾಳಿ ಮಾಡಬಾರದು ಎಂಬ ನಿಯಮವಿದ್ದರೂ ಪಾಕ್ ಸೈನಿಕರು ನಿಯಮವನ್ನು ಗಾಳಿಗೆ ತೂರಿ ಗಡಿಯಲ್ಲಿರುವ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸಿದ್ದಾರೆ. ಪರಿಣಾಮ ಜಮ್ಮು, ರಜೌರಿಯಲ್ಲಿ ನೂರಾರು ಮನೆಗಳು ಹಾನಿಗೀಡಾಗಿವೆ. ಅಲ್ಲದೆ ಜಮ್ಮುವಿನ ಕಂಚಕ್ ಬೆಲ್ಟ್ ನಲ್ಲಿರುವ ಸರ್ಕಾರಿ ಐಬಿ ಮೇಲೂ ಶೆಲ್ ದಾಳಿಯಾಗಿದ್ದು, ಶೆಲ್ ದಾಳಿಯಿಂದಾಗಿ ಐಬಿ ಗೋಡೆಗಳು ಜಖಂಗೊಂಡಿವೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದ ಗಡಿಯಲ್ಲಿರುವ ಶಾಲಾ-ಕಾಲೇಜುಗಳನ್ನು ಸ್ಥಗಿತಗೊಳಿಸಲಾಗಿದ್ದು, ಗಡಿಯಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗುತ್ತಿದೆ.