ನವದೆಹಲಿ: ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇರೆಗೆ 20 ಮಂದಿ ಆಮ್ ಆದ್ಮಿ ಪಕ್ಷದ ಶಾಸಕರನ್ನು ಅನರ್ಹಗೊಳಿಸಿದ್ದು ತುಘಲಕ್ ಶಾಹಿ ನಿರ್ಧಾರ ಎಂದು ಬಿಜೆಪಿ ಪಕ್ಷದ ಹಿರಿಯ ಮುಖಂಡ ಯಶ್ವಂತ್ ಸಿನ್ಹಾ ಹೇಳಿದ್ದಾರೆ.
ಭಾನುವಾರ ಈ ಬಗ್ಗೆ ಟ್ವೀಟ್ ಮಾಡಿರುವ ಯಶ್ವಂತ್ ಸಿನ್ಹಾ, ಆರೋಪ ಎದುರಿಸುತ್ತಿರುವ ಶಾಸಕರ ವಾದ ಆಲಿಸಿಲ್ಲ.. ಈ ಬಗ್ಗೆ ಯಾವುದೇ ರೀತಿಯ ವಿಚಾರಣೆ ನಡೆಸಿಲ್ಲ..ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ಇದ್ದು, ಕನಿಷ್ಟ ಪಕ್ಷ ನ್ಯಾಯಾಲಯದ ಆದೇಶದವರೆಗೂ ಕಾಯದೇ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ. ಇದು ನಿಜಕ್ಕೂ ತುಘಲಕ್ ಶಾಹಿ ನಿರ್ಧಾರ ಎಂದು ತಮ್ಮ ಅಸಮಾಧಾನ ವ್ಯಕ್ತಪಜಡಿಸಿದ್ದಾರೆ.
ಈ ಹಿಂದೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಗರಂ ಆಗಿದ್ದ ಸಿನ್ಹಾ, ತಮ್ಮ ಭೇಟಿಗೆ ಮೋದಿ ಅನವು ಮಾಡಿಕೊಟ್ಟಿಲ್ಲ. ಹೀಗಾಗಿ ಅವರ ಕುರಿತಾದ ನನ್ನ ಅಭಿಪ್ರಾಯಗಳನ್ನು ನೇರವಾಗಿಯೇ ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತೇನೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಬಿಜೆಪಿಯಲ್ಲಿ ಹಿರಿಯ ನಾಯಕರಿಗೆ ಬೆಲೆಯೇ ಇಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಆಪ್ ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಪ್ರಧಾನಿ ಮೋದಿ ವಿರುದ್ಧ ಸಿನ್ಹಾ ಗರಂ ಆಗಿದ್ದಾರೆ.
ಸಂಸದೀಯ ಕಾರ್ಯದರ್ಶಿ ಹುದ್ದೆ ಹೊಂದಿದ್ದ 20 ಮಂದಿ ಆಪ್ ಶಾಸಕರ ಅನರ್ಹತೆಗೆ ಈ ಹಿಂದೆ ಚುನಾವಣಾ ಆಯೋಗ ರಾಷ್ಟ್ರಪತಿ ಕೋವಿಂದ್ ಅವರಿಗೆ ಶಿಫಾರಸ್ಸು ಮಾಡಿತ್ತು. ಆಯೋಗದ ಶಿಫಾರಸ್ಸಿನಂತೆ ನಿನ್ನೆ ಕೋವಿಂದ್ ಅವರು ಅಂಕಿತ ಹಾಕಿದ್ದರು. ಆ ಮೂಲಕ ಲಾಭದಾಯಕ ಹುದ್ದೆ ಹೊಂದಿದ ಆಪ್ ನ 20 ಶಾಸಕರು ಅನರ್ಹಗೊಂಡಂತಾಗಿದೆ. ಇಂದು ಆಪ್ ಶಾಸಕರ ಕೋವಿಂದ್ ಅವರ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಿದ್ದು, ಇಂದು ಅದರ ವಿಚಾರಣೆ ನಡೆಯಲಿದೆ.