ದೇಶ

ವಧುವಿನ ಕನ್ಯತ್ವ ಪರೀಕ್ಷೆ ವಿರೋಧಿಸಿದ ಯುವಕರ ಮೇಲೆ ಮದುವೆ ಮಂಟಪದಲ್ಲೇ ಹಲ್ಲೆ

Nagaraja AB

ಪುಣೆ:  ವಧುವಿನ ಕನ್ಯತ್ವ ಪರೀಕ್ಷೆ ವಿರೋಧಿಸಿದ ಯುವಕರಿಗೆ ಮದುವೆ ಮಂಟಪದಲ್ಲೇ ಥಳಿಸಿರುವ ಘಟನೆ ಯುರವಾಡದ ಭರತ್ ನಗರದಲ್ಲಿ ನಡೆದಿದೆ.

 ಪಂಪ್ರಿಯಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಸಮುದಾಯದ ಮುಖಂಡರು ಸಭೆ ನಡೆಸಿ ಕನ್ಯತ್ವ ಪರೀಕ್ಷೆ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದ್ದು, ಆ ಪರೀಕ್ಷೆ ನಡೆಯಬೇಕೆಂದು ನಿರ್ಧರಿಸಲಾಗಿದೆ.

ಆದರೆ, ಇಂತಹ ಪದ್ದತಿಯನ್ನು  ಯುವಕರ ಗುಂಪೊಂದು ವಿರೋಧಿಸುತ್ತಾ ಬಂದಿದ್ದು, ವಾಟ್ಸಾಪ್ ನಲ್ಲಿ ಗುಂಪು ರೂಪಿಸಿಕೊಂಡು ಇದರ ವಿರುದ್ಧ ಧ್ವನಿ ಎತ್ತುವ ಕೆಲಸದಲ್ಲಿ ನಿರತವಾಗಿದೆ.ವಧುವಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಮುದಾಯದಲ್ಲಿ ಜನ  ಜಾಗೃತಿ ಮೂಡಿಸಲಾಗುತ್ತಿದೆ .

ಮದುವೆ ಮಂಟಪದಲ್ಲಿದ್ದ  ಆ ಯುವಕರ  ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಭರತ್ ನಗರದ ನಿವಾಸಿ ಪ್ರಶಾಂತ್ ಅಂಕುಶ್ ಇಂದ್ರೇಕರ್ ನೀಡಿರುವ ದೂರಿನ ಅನ್ವಯ  ಪೊಲೀಸರು  ಇಬ್ಬರನ್ನು ಬಂಧಿಸಿದ್ದು, 40 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಆಯುಕ್ತ ಗಣೇಶ್ ಶಿಂಧೆ ತಿಳಿಸಿದ್ದಾರೆ.

ನಂತರ ಮಹಾರಾಷ್ಟ್ರ ಅಂದಶ್ರದ್ಧ ನಿರ್ಮೂಲನಾ ಸಮಿತಿ ನೆರವಿನೊಂದಿಗೆ ವಾಟ್ಸಪ್ ಗುಂಪಿನ ಯುವಕರು ಉಪ ಆಯುಕ್ತ ದೀಪಕ್ ಸಕೊರೆ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದು, ಕನ್ಯತ್ವ ಪರೀಕ್ಷೆ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಭರತ್ ನಗರದಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

SCROLL FOR NEXT