ನವದೆಹಲಿ: ದೆಹಲಿಯಲ್ಲಿ ಉಪ ಚುನಾವಣೆ ಘೋಷಣೆ ಮಾಡುವುದರಿಂದ ದೆಹಲಿಯ ಅಭಿವೃದ್ಧಿ ಕಾರ್ಯಗಳು 2 ವರ್ಷಗಳ ಕಾಲ ತಡವಾಗಲಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಲಾಭದಾಯಕ ಹುದ್ದೆ ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಆಪ್ ನ 20 ಶಾಸಕರನ್ನು ಅನರ್ಹಗೊಳಿಸುವ ಕುರಿತು ಕೇಂದ್ರ ಚುನಾವಣಾ ಆಯೋಕ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದು, ಇದೀಗ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಆಪ್ ಶಾಸಕರು ರಾಷ್ಟ್ರಪತಿಗಳ ಅಂಕಿತ ಪ್ರಶ್ನಿಸಿ ದೆಹಲಿ ಹೈಕೋರ್ಟ್ ನಲ್ಲಿ ಹೊಸ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಅರ್ಜಿ ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಇನ್ನು ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಉಪ ಚುನಾವಣೆ ದೆಹಲಿ ಜನತೆಗೆ ದುಬಾರಿಯಾಗಿ ಪರಿಣಮಿಸುತ್ತದೆ. ದೆಹಲಿಯಲ್ಲಿ ಹಾಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಚುನಾವಣೆಯಿಂದಾಗಿ ತಡವಾಗಲಿದೆ ಎಂದು ಹೇಳಿದ್ದಾರೆ. ಅಂತೆಯೇ ಆಪ್ ಶಾಸಕರ ಅನರ್ಹತೆ ಕುರಿತು ಮಾತನಾಡಿರುವ ಕೇಜ್ರಿವಾಲ್, ಶಾಸಕರನ್ನು ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಗಿತ್ತಾದರೂ ಅವರಿಗೆ ದೆಹಲಿ ಸರ್ಕಾರ ಯಾವುದೇ ರೀತಿಯ ವೇತನ ನೀಡಿಲ್ಲ. ಈ 20 ಶಾಸಕರಿಗೆ ನಾನು ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು ಅಷ್ಟೇ.. ಹೀಗಿದ್ದೂ ಅವರ ಅನರ್ಹತೆ ಸರಿಯಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇದೇ ವೇಳೆ ತಾವು ಉಪಚಾನವಣೆ ಬೇಡ ಎಂದಾಕ್ಷಣ ನಾನು ಬಿಜೆಪಿಗೆ ಹೆದರುತ್ತಿದ್ದೇನೆ ಎಂದು ಅಲ್ಲ. ನಾವು ಸತ್ಯ ಮತ್ತು ಧೈರ್ಯದಿಂದ ಇದ್ದಾಗ ಎಂತಹ ಸಮಸ್ಯೆಗಳನ್ನಾದರೂ ಎದುರಿಸಬಹುದು. ದೆಹಲಿಯಲ್ಲಿ ಚುನಾವಣೆ ಹೇರುವ ಮೂಲಕ ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ತೊಡಕುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.