ಆಗ್ರಾ: ಆಗ್ರಾದ ವಿಶ್ವ ಪ್ರಸಿದ್ಧ ತಾಜ್ ಮಹಲ್ ಇನ್ನು ಸೂರ್ಯೋದಯಕ್ಕೆ ಅರ್ಧ ತಾಸು ಮೊದಲೇ ಪ್ರವಾಸಿಗರ ವೀಕ್ಷಣೆಗೆ ತೆರೆದಿರುತ್ತದೆ. ಇದೇ ಗುರುವಾರದಿಂದ ಈ ನೂತನ ವೇಳಾಪಟ್ಟಿ ಜಾರಿಗೆ ಬರುತ್ತಿದೆ ಎಂದು ಬಾರತೀಯ ಪುರಾತತ್ವ ಇಲಾಖೆ ತಿಳಿಸಿದೆ.
ಹೊಸ ವೇಳಾಪಟ್ಟಿ ಅನುಸಾರ ಬೆಳಗ್ಗೆ ಸೂರ್ಯೋದಯಕ್ಕೆ ಅರ್ಧ ತಾಸು ಮುನ್ನ ತಾಜ್ ಮಹಲ್ ವೀಕ್ಷಣೆಗೆ ಮುಕ್ತವಾಗಲಿದ್ದು ಸಂಜೆ ಸೂರ್ಯಾಸ್ತಮಾನದ 45 ನಿಮುಇಷಗಳ ಮುನ್ನವೇ ಮುಚ್ಚಲಾಗುತ್ತದೆ. ನೈಸರ್ಗಿಕ ಬೆಳಕಿನಲ್ಲಿ ತಾಜ್ ಭದ್ರತಾ ತಪಾಸಣೆಗಾಗಿ ಈ ನಿಯಮ ಜಾರಿಯಾಗುತ್ತಿದ್ದು ಇದರಿಂದ ಬೆಳಗಿನ ಸೂರ್ಯೋದಯದ ವೇಳೆ ತಾಜ್ ಸೌಂದರ್ಯವನ್ನು ವೀಕ್ಷಿಸಲು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.
ಪ್ರವಾಸಿಗರ ಸತತ ಬೇಡಿಕೆಯ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾಗಿ ಪುರಾತತ್ವ ಇಲಾಖೆ ಮುಖ್ಯಸ್ಥ ಭುವನ್ ವಿಕ್ರಮ್ ಹೇಳಿದ್ದಾರೆ. ಇನ್ನು ದಿನವೊಂದಕ್ಕೆ ಹದಿನೈದು ವರ್ಷದ ಒಳಗಿನ ಮಕ್ಕಳು ಸೇರಿ 40,000 ಜನರಿಗೆ ಮಾತ್ರ ತಾಜ್ ವೀಕ್ಷಿಸಲು ಅವಕಾಶ ಕಲ್ಪಿಸಿ ಕೊಡುವಂತೆ ನಿಯಮಾವಳಿ ರಚಿಸಲು ಇಲಾಖೆ ತೀರ್ಮಾನಿಸಿದೆ. ಇದರೊಡನೆ ತಾಜ್ ವೀಕ್ಷಣೆ ಪ್ರವೇಶ ದರದಲ್ಲಿಯೂ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಪುರಾತತ್ವ ಇಲಾಖೆ ಮೂಲಗಳು ತಿಳಿಸಿದೆ.