ನವದೆಹಲಿ: ಭ್ರಷ್ಟಾಚಾರ ವಿರುದ್ಧದ ಯುದ್ಧದಲ್ಲಿ 'ಶ್ರೀಮಂತರು ಮತ್ತು ಶಕ್ತಿವಂತರು' ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭ್ರಷ್ಟಾಚಾರದ ಅಪರಾಧಿಗಳು ಇಂದು ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಎನ್‌ಸಿಸಿ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಅಧಿಕಾರದಲ್ಲಿರುವ ಭ್ರಷ್ಟ ಜನರ ಪರವಾಗಿ ನ್ಯಾಯ ಇರುತ್ತದೆ ಎಂದು ಸಾಮಾನ್ಯ ಮನುಷ್ಯರು ನಂಬಿದ್ದರು. ಆದರೆ ಇದು ಇನ್ನು ಮುಂದೆ ನಡೆಯುವುದಿಲ್ಲ ಎಂಬುದು ಇದೀಗ ಸಾಬೀತವಾಗಿದೆ. ಭ್ರಷ್ಟಾಚಾರ ಮಾಡಿ ಕೆಲವರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದರು.
ಭ್ರಷ್ಟಾಚಾರ ಮಾಡಿದ್ದ ಮೂರು ಮಾಜಿ ಮುಖ್ಯಮಂತ್ರಿಗಳು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಈ ಘಟನೆ ಭ್ರಷ್ಟಾಚಾರವನ್ನು ತೊಡೆದುಹಾಕಲು ಬಡವರಲ್ಲಿ ಹೆಚ್ಚಿನ ಮನಸ್ಥೈರ್ಯ ನೀಡುತ್ತದೆ ಎಂದರು.
ಕಳೆದ ವಾರವಷ್ಟೇ ಬಹುಕೋಟಿ ಮೇವು ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರು ಐದು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಅಲ್ಲದೆ ಹರಿಯಾಣ ಮಾಜಿ ಮುಖ್ಯಮಂತ್ರಿ ಒಪಿ ಚೌಟಾಲ ಸಹ ಜೈಲು ಶಿಕ್ಷೆಗೆ ಗುರಿಯಾಗಿದ್ದು ಇವರ ಪೈಕಿ ಲಾಲು ಪ್ರಸಾದ್ ಯಾದವ್ ಅವರನ್ನು ಮುಖ್ಯವಾಗಿಟ್ಟುಕೊಂಡು ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟ ಹೀಗೆ ಮುಂದುವರೆಯುವುದು ಹಾಗೂ ತಪ್ಪಿತಸ್ಥರು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದೇ ವೇಳೆ ಭಾರತದ ಯುವಜನತೆ ಭ್ರಷ್ಟಾಚಾರವನ್ನು ಒಪ್ಪಿಕೊಳ್ಳುವುದಿಲ್ಲ. ಭ್ರಷ್ಟಾಚಾರದ ಮತ್ತು ಕಪ್ಪು ಹಣದ ವಿರುದ್ಧ ಹೋರಾಟವು ನಿಲ್ಲುವುದಿಲ್ಲ. ಇದು ಭಾರತದ ಯುವಕರ ಭವಿಷ್ಯದ ಹೋರಾಟವಾಗಿದೆ ಎಂದು ಮೋದಿ ಹೇಳಿದರು.