ಸೇನೆಗೆ ಸೇರ್ಪಡೆಯಾದ ಕಾರಂಜ್ ಜಲಾಂತರ್ಗಾಮಿ ನೌಕೆ
ಮುಂಬೈ: ಸ್ಕಾರ್ಪಿಯನ್ ಸರಣಿಯ ಸ್ವದೇಶಿ ನಿರ್ಮಿತ 3ನೇ ಜಲಾಂತರ್ಗಾಮಿ ನೌಕೆ 'ಕಾರಂಜ್' ಅನ್ನು ಬುಧವಾರ ಭಾರತೀಯ ನೌಕಾಪಡೆಗೆ ಅಧಿಕೃತವಾಗೆ ಸೇರ್ಪಡೆಗೊಳಿಸಲಾಯಿತು.
ಮುಂಬೈನ ಮಡಗಾವ್ ಡಾಕ್ ಲಿಮಿಟೆಡ್ ಶಿಪ್ ಯಾರ್ಡ್‌ನಲ್ಲಿ ಇಂದು ಭಾರತೀಯ ನೌಕಾದಳಕ್ಕೆ ಕಾರಂಜ್ ಜಲಾಂತರ್ಗಾಮಿ ನೌಕೆಯನ್ನು ಒಪ್ಪಿಸಲಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿಯನ್ವಯ ನೌಕೆ ಶೀಘ್ರವೇ ತನ್ನ ಕಾರ್ಯಾರಂಭ ಮಾಡಲಿದೆ.
ಜಲಾಂತರ್ಗಾಮಿ ಯೋಜನೆ 75ರ ಅಡಿಯಲ್ಲಿ ಕೇಂದ್ರ ಸರ್ಕಾರ ಒಟ್ಟು 6 ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕೆ 2005ರ ಅಕ್ಟೋಬರ್ ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ 30 ವರ್ಷಗಳ ಈ ಯೋಜನೆಗೆ 1999ರಲ್ಲಿ ಸಂಪುಟ ಸಮಿತಿಯು ಒಪ್ಪಿಗೆ ನೀಡಿತ್ತು. ಡಿಸಿಎಸ್‌ಎಸ್ ಆಫ್ ಫ್ರಾನ್ಸ್ ಸಹಯೋಗದಲ್ಲಿ ಮುಂಬೈನ ಮಡಗಾವ್ ಡಾಕ್ ಶಿಪ್ ಯಾರ್ಡ್ ನಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. 2020ರ ವೇಳೆಗೆ ಭಾರತೀಯ ನೌಕಾ ಪಡೆಯು ಒಟ್ಟು 24 ಆಧುನಿಕ ಸಬ್ ಮರೀನ್‌ಗಳನ್ನು ಹೊಂದಿರಲಿದೆ. ಈ ಹಿಂದೆ ಇದೇ ಸ್ಕಾರ್ಪಿಯನ್ ಸರಣಿಯ ಮೊದಲ ಜಲಾಂತರ್ಗಾಮಿ ನೌಕೆ ಐಎನ್ ಎಸ್ ಕಲ್ವರಿ, ಕಳೆದ ಸೆಪ್ಚೆಂಬರ್ ನಲ್ಲಿ ಸೇನೆಗೆ ಸೇರ್ಪಡೆಯಾಗಿತ್ತು. ಇದರ ಬೆನ್ನಲ್ಲೇ ೨ನೇ ಜಲಾಂತರ್ಗಾಮಿ ನೌಕೆಯಾದ ಐಎನ್‌ಎಸ್ ಕಂದೇರಿ ಡಿಸೆಂಬರ್‌ನಲ್ಲಿ ನೌಕಾಪಡೆಯನ್ನು ಸೇರ್ಪಡೆಗೊಂಡಿತ್ತು.
ಪ್ರಸ್ತುತ ಸೇನೆಗೆ ಸೇರ್ಪಡೆಯಾಗಿರುವ ಕಾರಂಜ್ ನೌಕೆ ಮೂರನೆಯದ್ದಾಗಿದೆ. ಇನ್ನು ಈ ಕಾರಂಜ್ ನೌಕೆ ಟೈಗರ್ ಶಾರ್ಕ್ ರೀತಿಯಲ್ಲಿ ಚುರುಕುತನವನ್ನು ಹೊಂದಿದ್ದು, ಭಾರತದ ಸಾಗರದ ಅತ್ಯಂತ ಆಳದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಎಂತಹ ಸಂದರ್ಭವನ್ನು ಕೂಡ ಎದುರಿಸಿ ಮುನ್ನುಗ್ಗುವ ಕಾರ್ಯಕ್ಷಮತೆ ಈ ಕಾರಂಜ್ ನೌಕೆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ಹಣಿಯಲು ಭಾರತಕ್ಕೆ ಪ್ರಬಲ ಅಸ್ತ್ರ
ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪ್ರಭುತ್ವ ಸಾಧಿಸಲು ಚೀನಾ ಹವಣಿಸುತ್ತಿದ್ದು, ಈಗಾಗಲೇ ದಕ್ಷಿಣ ಚೀನಾ ಸಮುದ್ರವನ್ನು ಚೀನಾ ಬಹುತೇಕ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಹೀಗಾಗಿ ನೆರೆಯ ಚೀನಾ ದೇಶದ ಪ್ರಾಬಲ್ಯ ಹತ್ತಿಕ್ಕಲು ಸಮುದ್ರದಲ್ಲಿ ಭಾರತೀಯ ಸೇನೆಯ ಸಾಮರ್ಥ್ಯ ಹೆಚ್ಚಲೇ ಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತ ಸಹ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಲು ಈ ಹಿಂದೆಯೇ ಒತ್ತು ನೀಡಿತ್ತು. ಇದೇ ಕಾರಣಕ್ಕೆ 6 ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿತ್ತು. ಇದೀಗ ಈ 6 ನೌಕೆಗಳ ಪೈಕಿ ಮೂರು ಸೇನೆಗೆ ಸೇರ್ಪಡೆಯಾಗಿವೆ.