ದೇಶ

ಸಂಜಯ್ ದತ್ ಬಿಡುಗಡೆಯಲ್ಲಿ ಸರ್ಕಾರ ಯಾವುದೇ ಉಲ್ಲಂಘನೆ ಮಾಡಿಲ್ಲ: ಬಾಂಬೆ ಹೈಕೋರ್ಟ್

Vishwanath S
ಮುಂಬೈ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಅಪರಾಧದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ನಟ ಸಂಜಯ್ ದತ್ ಅವರನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಿರುವುದರಲ್ಲಿ ರಾಜ್ಯ ಸರ್ಕಾರ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. 
ಶಿಕ್ಷೆ ಅವಧಿ ಇನ್ನು ಎಂಟು ತಿಂಗಳು ಇರುವಂತೆ ಸಂಜಯ್ ದತ್ ಅವರನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಪುಣೆಯ ನಿವಾಸಿ ಪ್ರದೀಪ್ ಭಾಲೆಕರ್ ಎಂಬುವರು ಬಾಂಬೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಧೀಶರಾದ ಎಸ್ ಸಿ ಧರ್ಮಾಧಿಕಾರಿ ಮತ್ತು ಭಾರತಿ ಡಾಂಗ್ರೆ ಅವರು ಅವಧಿಗೂ ಮುನ್ನ ಸಂಜಯ್ ದತ್ ಬಿಡುಗಡೆ ಮಾಡಿರುವುದರಲ್ಲಿ ರಾಜ್ಯ ಸರ್ಕಾರ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಆದೇಶಿಸಿದೆ. 
ರಾಜ್ಯ ಗೃಹ ಇಲಾಖೆ ಸಲ್ಲಿಸಿದ ದಾಖಲೆಗಳಲ್ಲಿ ಮತ್ತು ರಾಜ್ಯ ಸರ್ಕಾರ ನೀಡಿದ ವಿವರಣೆಯಲ್ಲಿ ಯಾವುದೇ ದೋಷಗಳು ಕಂಡುಬಂದಿಲ್ಲ. ಜತೆಗೆ ವಿವೇಚನೆಯ ಅಧಿಕಾರಗಳ ದುರ್ಬಳಕೆ ಅಥವಾ ಉಲ್ಲಂಘನೆಯಾಗಿರುವುದು ಕಂಡು ಬಂದಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ. 
ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾದ್ದರಿಂದ ಮುಂಬೈನ ಟಾಡಾ ನ್ಯಾಯಾಲಯ ದತ್ ಅವರಿಗೆ ಆರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ 2007ರ ಜುಲೈ 31ರಂದು ತೀರ್ಪು ನೀಡಿತ್ತು. 
ಈ ತೀರ್ಪಿನ ವಿರುದ್ಧ ಸಂಜಯ್ ದತ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ 2013ರಲ್ಲಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ ಶಿಕ್ಷೆಯ ಅವಧಿಯನ್ನು 5 ವರ್ಷಗಳಿಗೆ ಇಳಿಕೆ ಮಾಡಿತ್ತು. ಶಿಕ್ಷೆ ಅನುಭವಿಸುತ್ತಿದ್ದಾಗ 2013ರಲ್ಲಿ ದತ್ ಗೆ 90 ದಿನಗಳ ಪೆರೋಲ್ ನೀಡಲಾಗಿತ್ತು. ನಂತರ ಅದನ್ನು 30 ದಿನ ವಿಸ್ತರಿಸಲಾಗಿತ್ತು. 
SCROLL FOR NEXT