ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ; ಅಫ್ಘಾನಿಸ್ತಾನದ ಜಲಾಲಾಬಾದ್ ರಾಜ್ಯಪಾಲರ ನಿವಾಸಕ್ಕೆ ಆಗಮಿಸಿದ್ದ ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಭೇಟಿಯಾಗಲು ತೆರಳುತ್ತಿದ್ದ ಹಿಂದೂ ಮತ್ತು ಸಿಖ್ಖರನ್ನು ಗುರಿಯಾಗಿರಿಸಿ ನಡೆಸಲಾದ ಆತ್ಮಾಹುತಿ ದಾಳಿ ಪ್ರಕರಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ತೀವ್ರವಾಗಿ ಖಂಡಿಸಿದ್ದಾರೆ.
ದಾಳಿ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಅಫ್ಘಾನಿಸ್ತಾನದಲ್ಲಿ ನಿನ್ನೆ ನಡೆದ ಉಗ್ರರ ದಾಳಿಯನ್ನು ಭಾರತ ತೀವ್ವವಾಗಿ ಖಂಡಿಸುತ್ತದೆ. ಅಫ್ಘಾನಿಸ್ತಾನದ ಬಹುಸಂಸ್ಕೃತಿಯ ಮೇಲೆ ದಾಳಿ ನಡೆಸಿದ್ದಾರೆ. ಮೃತರ ಕುಟುಂಬಸ್ಥರ ಕುರಿತಂತೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಇಂತಹ ದುಃಖಕರ ಸಮಯದಲ್ಲಿ ಅಫ್ಘಾನಿಸ್ತಾನ ಸರ್ಕಾರಕ್ಕೆ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಅಫ್ಘಾನಿಸ್ತಾನದ ಜಲಾಲಾಬಾದ್ ನಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದ ಉಗ್ರರು 19 ಮಂದಿಯನ್ನು ಬಲಿಪಡೆದುಕೊಂಡಿದ್ದರು.
19 ಮಂದಿ ಮೃತರಲ್ಲಿ 17 ಮಂದಿ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ಖ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರೂ ಕೂಡ ಹಿಂದೂ ಮತ್ತು ಸಿಖ್ಖ್ ಸಮುದಾಯದವರೆಂದು ಹೇಳಲಾಗುತ್ತಿದೆ.
ಅಕ್ಟೋಬರ್ ತಿಂಗಳಿನಲ್ಲಿ ನಡೆಯಿಲಿದ್ದ ಸಂಸತ್ ಚುನಾವಣೆಯಲ್ಲಿ ಭಾಗವಹಿಸುವ ಯೋಜನೆ ಹೊಂದಿದ್ದ ಹಿರಿಯ ಸಿಖ್ ಮುಖಂಡ ಅವತಾರ್ ಸಿಂಗ್ ಖಲ್ಸ ಅವರು ಕೂಡ ದಾಳಿಯಲ್ಲಿ ಬಲಿಯಾಗಿದ್ದರು.